ಶುಕ್ರವಾರ, ಏಪ್ರಿಲ್ 8, 2022

ಡೊಂಬರಮತ್ತೂರ ಗ್ರಾಮದ ಆದಿದೇವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ

 ಹಾವೇರಿ ಜಿಲ್ಲೆ ಸವಣೂರು ತಾಲೂಕು ಸುಕ್ಷೇತ್ರ ಡೊಂಬರಮತ್ತೂರ ಗ್ರಾಮದ

ಆದಿದೇವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ

    ಯುಗ-ಯುಗಗಳಿಂದ ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಪರಂಪರೆ, ನಂಬಿಕೆ, ಸಂಪ್ರದಾಯಗಳ ಭದ್ರ ಬುನಾದಿಯ ಮೇಲೆ ಬೆಳೆದು ಬಂದಿದೆ. ಇವುಗಳ ಹಿನ್ನೆಲೆಯಲ್ಲಿ ಜಾತ್ರೆ-ಉತ್ಸವಗಳು ರೂಪುಗೊಂಡು ತನ್ನದೇ ಆದ ಸ್ವರೂಪವನ್ನು ಪಡೆದುಕೊಂಡಿವೆ. ಜಾತ್ರೋತ್ಸವಗಳು ಜನಪದರ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖ ಆಧಾರಸ್ತಂಭಗಳೇ ಆಗಿರುವುದರಿಂದ ಗ್ರಾಮೀಣ ಬದುಕಿನ ಜೀವಂತ ನಾಡಿಮಿಡಿತಗಳೂ ಆಗಿವೆ. ಸಾಮಾಜಿಕ, ಧಾರ್ಮಿಕ ಹಾಗೂ ಕಲಾತ್ಮಕ ಬದುಕಿನ ಜೀವಸತ್ವವು ಅಲ್ಲಿ ಹಲವು ಮುಖಗಳಲ್ಲಿ ವ್ಯಕ್ತಗೊಂಡಿರುವುದನ್ನು ಕಾಣುತ್ತೇವೆ. ಜಾತ್ರೆ ಕೇವಲ ಜನ-ದನಗಳ ವ್ಯಾಪಾರ ವಹಿವಾಟುಗಳ ಕೇಂದ್ರವಷ್ಟೇ ಅಲ್ಲ; ಅದೊಂದು ಬಹುಮುಖಿ ಸಾಂಸ್ಕೃತಿಕ ಜೀವನದ ಸಮಾಗಮ. ಒಂದೊಂದು ಗ್ರಾಮದಲ್ಲಿ ನಡೆಯುವ ಒಂದೊಂದು  ಜಾತ್ರೆಗಳು ಆಯಾಗ್ರಾಮದ, ಗ್ರಾಮದೇವತೆಯ ಹಿನ್ನೆಲೆಯನ್ನೂ ಅದರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ತಿಳಿಸುವ ದತ್ತಾಂಶಗಳಾಗಿವೆ.

ಮಾನವನ ನಾಗರಿಕತೆಯ ವಿಕಾಸದಲ್ಲಿ ಪ್ರಪಂಚದಾದ್ಯಂತ ಹಲವಾರು ಧರ್ಮಗಳಿದ್ದು, ಪ್ರತಿಯೊಂದು ಸಮಾಜದಲ್ಲಿ ಬದುಕುವ ಮನುಷ್ಯನು ಯಾವುದಾದರೊಂದು ಧರ್ಮಕ್ಕೆ ಬದ್ಧನಾಗಿಯೇ ಬದುಕುತ್ತಿರುತ್ತಾನೆ. ಹಾಗಾಗಿಧರ್ಮ ಎನ್ನುವುದು ಅವನ ಅಂತರಂಗದ ಅವಶ್ಯಕತೆಯಾಗಿದೆ. ಒಂದೊಂದು ಜಾತ್ರೆಯು ಒಂದೊಂದು ಧರ್ಮದ ಪ್ರೇರಣೆಯ ಹಿನ್ನೆಲೆಯಲ್ಲಿ ರೂಪಗೊಂಡಿರುತ್ತವೆ. ಆದರೆ ಜಾತ್ರೆ ಅದೇ ಧರ್ಮಕ್ಕೆ ಮಾತ್ರ ಸೀಮಿತವಾಗದೇ ಸಾಮರಸ್ಯದ ಕೊಂಡಿಆಗುತ್ತದೆ. ಏಕೆಂದರೆ ಜಾತ್ರೆಯಲ್ಲಿ ಎಲ್ಲ ಜನಾಂಗದವರು ಭಾಗವಹಿಸಿ ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತಾರೆ. ಹಿನ್ನೆಲೆಯಲ್ಲಿ ಜಾತ್ರೆ ಒಂದು ಸಂಕೀರ್ಣ ಸಾಂಸ್ಕೃತಿಕ, ಸರ್ವಧರ್ಮ, ಸಮ್ಮಿಳಿತ, ಮೂಲೋದ್ದೇಶದ ಆಧಾರದ ಮೇಲೆ ಜರುಗುತ್ತದೆ. ಜಾತ್ರೆ ಹಲವಾರು ದೃಷ್ಟಿಯಿಂದ ಹಳ್ಳಿಗರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರತಿಯೊಂದು ಜಾತ್ರೆಯು ಎಲ್ಲರನ್ನೂ ರಂಜಿಸುವ ಸಮಷ್ಟಿ ಬದುಕಿನ ಒಂದು ಸಮನ್ವಿತವಾದ ಸಾಂಸ್ಕೃತಿಕ ಮೊತ್ತವಾಗಿದೆ.

    ಇಂತಹ ಒಂದು ಜಾತ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಡೊಂಬರಮತ್ತೂರ ಗ್ರಾಮದಲ್ಲಿದೆ. ಗ್ರಾಮಕ್ಕೆ ತನ್ನದೇ ಆದಂತ ಚಾರಿತ್ರಿಕ ಐತಿಹ್ಯಗಳಿದ್ದು, ಊರಿನ ಹಿರಿಯರು ಈಗಲೂ ಹೇಳುವ ಐತಿಹ್ಯಗಳನ್ನು ಇಲ್ಲಿ ಕಾಣಬಹುದು.

ಐತಿಹ್ಯ-:ಮತ್ತೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಗ್ರಾಮದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದಾಗ ಗ್ರಾಮದೇವತೆಯಾದ ಬಸವಣ್ಣನು ಕೋಣನತಂಬಗಿ ಎಂಬ ಗ್ರಾಮದ ಬಳಿ ಪೂರ್ವ ದಿಕ್ಕಿನತ್ತ ಹರಿಯುತ್ತ ಉತ್ತರಕ್ಕೆ ಸಾಗಿ, ಮುಂದೆ ಪಶ್ಚಿಮದ ಕಡೆ ಹರಿಯುತ್ತಿತ್ತಂತೆ, ಹಾಗೇ ಅದು ನೇರವಾಗಿ ಉತ್ತರ ದಿಕ್ಕಿನೆಡೆಗೆ ಹೊರಟಾಗ ಗದ್ದೆಯಲ್ಲಿದ್ದಂಥ ಬಸವಣ್ಣನು ಗಂಗಾಮಾತೆಗೆತಂಗೀ ಗಂಗವ್ವಾ... ಊರಿನ ಜನಕ್ಕೆ ಬರಗಾಲವೊಡ್ಡದೇ ಕರುಣೆ ತೋರಿಸವ್ವಾ...’ ಎಂದು ಕೂಗಿ ಬೇಡಿಕೊಂಡನಂತೆ. ಆಗ ಗಂಗೆಯುಅಣ್ಣಾ... ಯಾವ ಕಡೆ ಹರಿಯಲಿ?’ ಎಂದಾಗಪೂರ್ವದ ಕಡೆ ಎಂದು ತಲೆ ಅಲ್ಲಾಡಿಸುತ್ತ ಸನ್ನೆ ಮಾಡಿದನಂತೆ. ಆಗ ವರದಾಯಿನಿಯಾದ ವರದೆಯು ಬಸವಣ್ಣನಿದ್ದಲ್ಲಿಗೇ ಬಂದು ಅವನ ಪಾದ ತೊಳೆದು, ಗ್ರಾಮದ ಪಕ್ಕದಲ್ಲೇ ಹಾಯ್ದು ಹೋದಳಂತೆ. ಹೀಗೆ ವರದೆಗೆ ದಾರಿ ತೋರಿಸಿದ ಬಸವಣ್ಣನ ಮುಖವು ಈಗಲೂ ಸಹ ಒಂದು ಕಡೆ ವಾಲಿದೆ ಎಂದು ಜನ ಹೇಳುತ್ತಾರೆ.

ಐತಿಹ್ಯ-: ಊರ ಗೌಡನ ಕನಸಿನಲ್ಲಿ ಬಂದ ಗಂಗಾ ದೇವಿಯುನಾನು ಒಮ್ಮೊಮ್ಮೆ ಮೈದುಂಬಿ ಹರಿಯುವಾಗ ಎಲ್ಲಿ ನಿಮಗೆ ಹಾನಿಯಾಗುವುದೋ ಏನೋ... ಕಾರಣ ನೀವೆಲ್ಲರೂ ಈ ಸ್ಥಳವನ್ನು ಬಿಟ್ಟು ದೂರದಲ್ಲಿ ಕಾಣುವ ಹೊಳೆ ಮಗ್ಗುಲಿನ ದಿಬ್ಬದ ಮೇಲೆ ಹೋಗಿ ನೆಲೆಸಿರಿ. ಸ್ಥಳ ಭಯ-ಭಕ್ತಿಯ ಸ್ಥಾನವಾಗಿದ್ದು, ಅಲ್ಲಿ ನೆಲೆಸುವ ಹಾಗೂ ಅಲ್ಲಿಗೆ ಬಂದು ಹೋಗುವ ಜನರಿಗೆ ಯಾವುದಕ್ಕೂ ಕೊರತೆಯುಂಟಾಗದು, ಎಲ್ಲರೂ ಸುಖದಿಂದಿರುವರು ಎಂದು ಹೇಳಿದಳಂತೆ. ಗಂಗೆಯ ಆಜ್ಞೆಯಂತೆ ಮರುದಿನದಿಂದಲೇ ಎಲ್ಲರೂ ದಿಬ್ಬದ ಮೇಲೆ ಬಂದು ನೆಲೆಸಿದರು. ಹಾಗೆಯೇ ಬಸವಣ್ಣನ ಮೂರ್ತಿಯನ್ನು ಸಹ ಎತ್ತಿಕೊಂಡು ಬಂದು ತಾವು ನೆಲೆಸಿದ ಹೊಳೆ ಪಕ್ಕದ ದಿಬ್ಬದ ಮೇಲೆ ಪತಿಷ್ಠಾಪಿಸಿದರು. ಅಂದಿನಿಂದ ಊರಿಗೆಹೊಳೆಮತ್ತೂರು ಎಂದು ಕರೆಯಲು ಪ್ರಾರಂಭಿಸಿದರು.

ಐತಿಹ್ಯ-:ಹೊಳೆಮತ್ತೂರು ಎಂದಿದ್ದ ಹೆಸರು ಮುಂದೆ ಕೆಲ ವರ್ಷಗಳ ನಂತರಡೊಂಬರಮತ್ತೂರು ಎಂದು ಬದಲಾದುದಕ್ಕೆ ಮತ್ತೊಂದು ಕಥೆಯನ್ನು ಹಿರಿಯರು ಹೇಳುತ್ತಾರೆ.

    ತುಂಬಾ ವರ್ಷಗಳ ಬಳಿಕ ಗ್ರಾಮಕ್ಕೆ ಊರೂರು ಅಲೆದು ತಮ್ಮ ಚಮತ್ಕಾರ, ಕಸರತ್ತುಗಳನ್ನು ತೋರಿಸಿ ಉಪಜೀವನ ಸಾಗಿಸುವದೊಂಬರು, ‘ಡಂಬರು, ‘ಡೊಂಬರು ಎಂತಲೂ ಕರೆಯಿಸಿಕೊಳ್ಳುವಡೊಂಬರಾಟದವರು ಬಂದರಂತೆ, ಬಂದವರು ಬಸವಣ್ಣನ ದೇವಸ್ಥಾನದ ಪಕ್ಕದಲ್ಲೇ ಜೋಪಡಿ ಹಾಕಿಕೊಂಡು ಉಳಿದುಕೊಂಡಿದ್ದರು. ರಾತ್ರಿ ತಮ್ಮ ಆಟವನ್ನು ತೋರಿಸಲೆಂದು ದೇವಸ್ಥಾನದ ಮುಂದಿನ ಜಾಗೆಯಲ್ಲಿ ಎರಡು ಕಂಬ ನಿಲ್ಲಿಸಿ, ಅದಕ್ಕೆ ತಂತಿಯನ್ನು ಕಟ್ಟಿ, ಅದರ ಮೇಲೆ ನಡೆಯುವ ಸಾಹಸವನ್ನು ಡಂಬರಾಟದ ಹುಡುಗಿ ಪ್ರದರ್ಶಿಸುತ್ತಿದ್ದಳು. ತುಂಬಾ ಜನ ನೆರೆದಿದ್ದರು. ಆಗ ಹುಡುಗಿ ತಂತಿಯ ಮೇಲೆ ನಡೆಯುತ್ತಿದ್ದಾಗ ಏನಾಯಿತೋ ಏನೋ ಎರಡೂ ಕಂಬದ ತುದಿಗೆ ಕಟ್ಟದ್ದ ತಂತಿ ಒಮ್ಮೆಲೇ ಹರಿದು ಕೆಳ ಬಿತ್ತು. ಆಶ್ಚರ್ಯವೆಂದರೆ ತಂತಿ ಹರಿದರೂ ಹುಡುಗಿ ಮಾತ್ರ ಕೆಳಗೆ ಬೀಳದೇ ಗಾಳಿಯಲ್ಲಿ ತೇಲುತ್ತ ಹಾಗೇ ನಿಂತಿದ್ದಳಂತೆ. ಹುಡುಗಿ ಅತ್ತಿತ್ತ ಜನರನ್ನು ನೋಡುತ್ತಾ ಬಸವಣ್ಣ ದೇವರತ್ತ ಕೈ ಮುಗಿಯುತ್ತಭಲೇ... ಇವತ್ತಿನ ಡಂಬರಾಟದೊಳಗ ಹೊಸಾ ಅನುಭವ ತೋರಿಸಿದ ಮತ್ತೂರು ಇದು, ಡಂಬರ ಮತ್ತೂರು ಇದು ಎಂದು ನೆರೆದವರೆಲ್ಲರಿಗೂ ಕೇಳಿಸುವಂತೆ ಕೂಗಿದಳಂತೆ. ಆವೊತ್ತಿನಿಂದಹೊಳೆಮತ್ತೂರು ಎಂಬುದುಡಂಬರಮತ್ತೂರು ಎಂದಾಗಿ, ಬರಬರುತ್ತ ಡಂಬರಮತ್ತೂರು>ಡೊಂಬರಮತ್ತೂರು ಎಂದು ಹೆಸರಾಯಿತೆಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಡೊಂಬರಮತ್ತೂರ ಗ್ರಾಮವು ಜಿಲ್ಲಾ ಕೇಂದ್ರದಿಂದ ೨೫ ಕಿ. ಮೀ. ದೂರವಿದ್ದು, ಸುಮಾರು ೪೦೦೦ ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಹಲವಾರು ಜಾತಿ ಜನಾಂಗದ ಬಾಂಧವರು ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಇಲ್ಲಿನ ಜನ ಪರಿಶ್ರಮ, ಶ್ರದ್ಧೆ, ತ್ಯಾಗ, ತಾಳ್ಮೆ, ಅನುಕಂಪ, ಸದಾಚಾರಗಳಿಗೆ ಹೆಸರಾದವರಲ್ಲದೇ ಶಾಂತಿ ಪ್ರಿಯರೂ, ಧರ್ಮ ಸಹಿಷ್ಣುತೆಯಿಂದ ಬಾಳುವವರಾಗಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯುಳ್ಳವರಾಗಿರುವುದರಿಂದ ಹಿಂದಿನಿಂದಲೂ ಇಲ್ಲಿದಾನ, ಧರ್ಮ, ಹಬ್ಬ, ಜಾತ್ರೆ, ಆಚರಣೆಗಳು, ಉತ್ಸವಗಳು ಜರುಗುತ್ತಲೇ ಇರುತ್ತವೆ.

    

ಹಾಗಾಗಿ ಇದೇ ೨೦೨೨ರ ಎಪ್ರಿಲ್ ೦೯ನೇ ತಾರೀಖಿನಿಂದ ೧೪ರ ವರೆಗೆ ಶ್ರೀ ಬಸವೇಶ್ವರ ದೇವರ ಜಾತ್ರೆಯು ಸಂಭ್ರಮ ಸಡಗರದಿಂದ ಜರುಗಲಿದೆ. ತನ್ನಿಮಿತ್ಯ ಲೇಖನ.

ಯುಗಾದಿ ಪಾಡ್ಯದಿಂದ ಚೈತ್ರ ಶುದ್ಧ ಸಪ್ತಮಿ ತಿಥಿಗೆ ಅಂದರೆ, ಜಾತ್ರೆಯ ಪ್ರಾರಂಭದ ದಿನ (೦೯-೦೪-೨೦೨೨) ಶನಿವಾರ ರಾತ್ರಿಹೂವಿನ ತೇರು ಅಥವಾಹೂವಿನ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಹೂವಿನ ತೇರು ಅಥವಾ ಗಚ್ಚಿನ ತೇರನ್ನು ಶೃಂಗಾರಗೊಳಿಸುತ್ತಾರೆ. ಮನೆಗಳೆಲ್ಲವೂ ಸುಣ್ಣ ಬಣ್ಣ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಊರು ಬಹು ಶೃಂಗಾರದಿಂದ ಕಂಗೊಳಿಸುತ್ತಿವೆ.

ಜಾತ್ರೆಯ ಮೊದಲ ದಿನದ ರಾತ್ರಿ ಶ್ರೀಬಸವೇಶ್ವರ (ಬಸವಣ್ಣ)ನನ್ನುಮದುಮಗನನ್ನಾಗಿ ಸಿಂಗರಿಸಿ, ಕ್ಷೀರ ಮತ್ತು ಜಲಾಭಿಷೇಕ ಮಾಡುತ್ತಾರೆ. ಜೊತೆಗೆ ಬಸವೇಶ್ವರನ ಪಕ್ಕದಲ್ಲಿರುವ ಈಶ್ವರನಿಗೂ ಅಭಿಷೇಕ ಜರುಗುವದು.

ಎರಡನೇ ದಿನ (೧೦-೦೪-೨೦೨೨) ಚೈತ್ರ ಶುದ್ಧ ನವಮಿಯ ರವಿವಾರ ಸಾಯಂಕಾಲ ಘಂಟೆಗೆ ಶ್ರೀ ಬಸವೇಶ್ವರ ದೇವರ ಜಾತ್ರಾ ರಥೋತ್ಸವ ಪ್ರಾರಂಭವಾಗುತ್ತದೆ. ಇದಕ್ಕೆ ದೊಡ್ಡತೇರು ಎಂತಲೂ ಕರೆಯುವರು. ಅಂದುಶ್ರೀ ರಾಮನವಮಿಯೂ ಸಹ ಇರುತ್ತದೆ.

ದೊಡ್ಡತೇರಿಗೆಬಾಬದಾರಮನೆಯಿಂದ ದೇವರು, ಉತ್ಸವ ಮೂರ್ತಿ, ಪಲ್ಲಕ್ಕಿ, ಎಡೆ, ಆರತಿ, ಕಳಶ ಮುಂತಾದವುಗಳನ್ನು ತಂದು ಅರ್ಪಿಸುತ್ತಾರೆ. ನಂತರ ಬಾಬದಾರ ಮನೆಯವರು, ಪೂಜಾರಿಗಳು ಹಾಗೂ ಊರಿನ ಪ್ರಮುಖರು ತೇರಿಗೆ ಪೂಜೆ ಸಲ್ಲಿಸಿ, ಎಡೆ ಹಿಡಿದು ಕಾಯಿ ಒಡೆದು ಪೂಜಿಸಿದ ನಂತರ ತೇರನ್ನು ಭಕ್ತ ಸಮೂಹವು ಎಳೆಯಲು ಶುರು ಮಾಡುತ್ತದೆ.

ತೇರೆಳೆಯುವಾಗ ಜಾತಿ-ಮತ-ಪಂಥದ ಭೇದ ಸಂಪೂರ್ಣವಾಗಿ ಅಳಿಸಿಹೋಗುವ ಲಕ್ಷಣಗಳನ್ನು ತುಂಬ ಮುಖ್ಯವೆಂದು ಭಾವಿಸಬೇಕಿದೆ. ತೇರುರಥ ಬೀದಿಯಲ್ಲಿ ಸಾಗುತ್ತಾ ದೇವಸ್ಥಾನದ ಕಡೆ ಹೊರಟಾಗ ಅಲ್ಲಿ ನೆರೆದಂಥ ಭಕ್ತರು ಬಾಳೆ ಹಣ್ಣು, ಉತ್ತತ್ತಿ, ನಿಂಬೆ ಹಣ್ಣು, ಅಡಿಕೆ, ಬೆಲ್ಲ, ನಾಣ್ಯ ಮುಂತಾದವನ್ನು ಭಕ್ತಿ, ಗೌರವ ಸೂಚಕವಾಗಿ ತೇರಿನತ್ತ ಎಸೆಯುತ್ತಾರೆ.

ಭಕ್ತರುತೇರು ಎಳೆದುಕೊಂಡು ದೇವಸ್ಥಾನದ ಕಡೆ ಸಾಗುವಾಗ ತೇರಿನ ಮುಂದೆ ಮುಂದೆ ಪುರವಂತರು, ನಂದಿಧ್ವಜ,  ಭಜನಾ ಮೇಳ, ಆಧುನಿಕ ಜಾಂಝ್ ಮೇಳ, ಬಾಜಾ-ಭಜಂತ್ರಿಯವರು ತಮ್ಮ ಕಲಾ ಪ್ರದರ್ಶನ ನೀಡುತ್ತ ಸಾಗುತ್ತಿರುತ್ತಾರೆ. ಜೊತೆಗೆ ಊರಿನ ಸುಮಂಗಲೆಯರು ಆರತಿಯೊಂದಿಗೆ ಭಕ್ತಿಯಿಂದ ಪಾಲ್ಗೊಂಡಿರುತ್ತಾರೆ.

ಪುರವಂತರು ವೀರಗಾಸೆ ಕುಣಿತವನ್ನು ಪ್ರದರ್ಶಿಸುತ್ತ ದೇವಸ್ಥಾನದ ಮುಂದೆ ಹಾಕಿದಂಥ ಅಗ್ನಿಕುಂಡಲದಲ್ಲಿ ಹಾಯುತ್ತಾರೆ. ಪುರವಂತರು ಅಗ್ನಿಕುಂಡಲದಲ್ಲಿ ಹಾಯ್ದು ಹೋದ ನಂತರ ಜಾತ್ರೆಗೆ ಬಂದ ಭಕ್ತರು ಅಗ್ನಿಕುಂಡದಲ್ಲಿ ಹಾಯ್ದು ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳುತ್ತಾರೆ. ತೇರು ನೋಡಿಕೊಂಡು ಪರ ಊರಿನ ಭಕ್ತರು ಹಣ್ಣು ಕಾಯಿ ಮಾಡಿಸಿಕೊಂಡು ಊರಿಗೆ ತೆರಳುತ್ತಾರೆ. ಅದೇ ದಿನ ರಾತ್ರಿ ಪುರಾಣ ಪ್ರವಚನಳು ನೆರವೇರುತ್ತವೆೆ.

ಮೂರನೇ ದಿನ (೧೧-೦೪-೨೦೨೨) ಅಂದರೆ ಚೈತ್ರ ಶುದ್ಧ ದಶಮಿಯ ಸೋಮವಾರದಂದುಐಗುಳು ಎಡೆ ಕೊಡುವುದು ಮಾಡುತ್ತಾರೆ. ‘ಐಗುಳು ಎಂಬುದು ಬಹುಷಃಅಯ್ಯಗಳು ಎಂದಿರಬಹುದು. ‘ಅಯ್ಯ ಎಂದರೆಅಪ್ಪ. ಅಂದರೆಐದು ಜನ ಪೂಜ್ಯರಿಗೆ ಎಡೆ ಕೊಡುವುದು ಎಂದಾಗಿರಲೂಬಹುದು. ಒಟ್ಟಿನಲ್ಲಿ ಊರಿನವರು ಕರೆಸಿದಂತ ಪೂಜ್ಯರಿಗೆ ಒಂದೊಂದು ಮನೆಯವರೂ ತಮ್ಮ ಮನೆಯಲ್ಲಿ ಮಾಡಿದ ವಿಶೇಷ ಅಡುಗೆಯನ್ನು ಮೊದಲುಐಗಳು ಎಡೆ ಕೊಟ್ಟ ನಂತರ ಮನೆಯವರು ಊಟ ಮಾಡುವುದು ರೂಢಿಯಲ್ಲಿದೆ.

ಅಂದು ಸಾಯಂಕಾಲಓಕಳಿ ಉತ್ಸವ, ‘ಕಡಬಿನ ಕಾಳಗ ಇರುತ್ತದೆ. ಊರಿನಲ್ಲಿ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿ ಆಡುವ ಪದ್ಧತಿಯಿಲ್ಲ; ಆದ್ದರಿಂದ ಜಾತ್ರೆಯ ಸಂದರ್ಭದಲ್ಲಿಯೇ ಓಕುಳಿ ಆಡುತ್ತಾರೆ. ಜೊತೆಗೆಎತ್ತುಗಳ ಮೆರವಣಿಗೆಯೂ ಸಹ ಇರುತ್ತದೆ.

ಇದೇ ದಿನ ರಾತ್ರಿ ಜಾತ್ರೆಯ ಅಂಗವಾಗಿ ಆರ್ಕೆಸ್ಟ್ರಾ ಮತ್ತು ಡಿಜೆ ಯವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ನಾಲ್ಕನೇ ದಿನವೂ ಎಂದಿನಂತೆ ಜಾತ್ರೆ ನೆರೆದಿರುವುದು. ದಿನಾಂಕ: ೧೨ ರಿಂದ ೧೪ರ ವರೆಗೆ ನಡೆಯುವಜಂಗಿ ನಿಕಾಲಿ ಕುಸ್ತಿಗಳನ್ನು ನೋಡಲು ದೇವಸ್ಥಾನದ ಮುಂದುಗಡೆ ಇರುವ ಹೊಲದಲ್ಲಿ ನಿರ್ಮಿಸಿದಕುಸ್ತಿ ಕಣದಲ್ಲಿ ಜನ ನೆರೆಯುತ್ತಾರೆ. ಕುಸ್ತಿಗಳು ಮೂರು ದಿನಗಳ ಕಾಲ ನಡೆಯುತ್ತವೆ. ಕುಸ್ತಿಯಾಡಲು ಬೇರೆ ಬೇರೆ ಜಿಲ್ಲೆ, ಊರುಗಳಿಂದ ಪ್ರಸಿದ್ಧ ಪೈಲವಾನರು ಆಗಮಿಸುತ್ತಾರೆ. ಕಡೆ ಕುಸ್ತಿಯ ದಿನ ವಿಜೇತ ಕುಸ್ತಿಪಟುಗಳಿಗೆ ಸನ್ಮಾನಿಸುವ ಮುಖಾಂತರ ಜಾತ್ರೆಗೆ ತೆರೆ ಬೀಳುತ್ತದೆ.

                                                                                                            -ಡಾ.ರಾಜಶೇಖರ ಚಂ.ಡೊಂಬರಮತ್ತೂರ

                                                                                                           Mob : 9591703777