ಶುಕ್ರವಾರ, ಏಪ್ರಿಲ್ 8, 2022

ಡೊಂಬರಮತ್ತೂರ ಗ್ರಾಮದ ಆದಿದೇವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ

 ಹಾವೇರಿ ಜಿಲ್ಲೆ ಸವಣೂರು ತಾಲೂಕು ಸುಕ್ಷೇತ್ರ ಡೊಂಬರಮತ್ತೂರ ಗ್ರಾಮದ

ಆದಿದೇವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ

    ಯುಗ-ಯುಗಗಳಿಂದ ನಮ್ಮ ದೇಶದಲ್ಲಿ ಹಲವಾರು ಧರ್ಮಗಳು ಪರಂಪರೆ, ನಂಬಿಕೆ, ಸಂಪ್ರದಾಯಗಳ ಭದ್ರ ಬುನಾದಿಯ ಮೇಲೆ ಬೆಳೆದು ಬಂದಿದೆ. ಇವುಗಳ ಹಿನ್ನೆಲೆಯಲ್ಲಿ ಜಾತ್ರೆ-ಉತ್ಸವಗಳು ರೂಪುಗೊಂಡು ತನ್ನದೇ ಆದ ಸ್ವರೂಪವನ್ನು ಪಡೆದುಕೊಂಡಿವೆ. ಜಾತ್ರೋತ್ಸವಗಳು ಜನಪದರ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖ ಆಧಾರಸ್ತಂಭಗಳೇ ಆಗಿರುವುದರಿಂದ ಗ್ರಾಮೀಣ ಬದುಕಿನ ಜೀವಂತ ನಾಡಿಮಿಡಿತಗಳೂ ಆಗಿವೆ. ಸಾಮಾಜಿಕ, ಧಾರ್ಮಿಕ ಹಾಗೂ ಕಲಾತ್ಮಕ ಬದುಕಿನ ಜೀವಸತ್ವವು ಅಲ್ಲಿ ಹಲವು ಮುಖಗಳಲ್ಲಿ ವ್ಯಕ್ತಗೊಂಡಿರುವುದನ್ನು ಕಾಣುತ್ತೇವೆ. ಜಾತ್ರೆ ಕೇವಲ ಜನ-ದನಗಳ ವ್ಯಾಪಾರ ವಹಿವಾಟುಗಳ ಕೇಂದ್ರವಷ್ಟೇ ಅಲ್ಲ; ಅದೊಂದು ಬಹುಮುಖಿ ಸಾಂಸ್ಕೃತಿಕ ಜೀವನದ ಸಮಾಗಮ. ಒಂದೊಂದು ಗ್ರಾಮದಲ್ಲಿ ನಡೆಯುವ ಒಂದೊಂದು  ಜಾತ್ರೆಗಳು ಆಯಾಗ್ರಾಮದ, ಗ್ರಾಮದೇವತೆಯ ಹಿನ್ನೆಲೆಯನ್ನೂ ಅದರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ತಿಳಿಸುವ ದತ್ತಾಂಶಗಳಾಗಿವೆ.

ಮಾನವನ ನಾಗರಿಕತೆಯ ವಿಕಾಸದಲ್ಲಿ ಪ್ರಪಂಚದಾದ್ಯಂತ ಹಲವಾರು ಧರ್ಮಗಳಿದ್ದು, ಪ್ರತಿಯೊಂದು ಸಮಾಜದಲ್ಲಿ ಬದುಕುವ ಮನುಷ್ಯನು ಯಾವುದಾದರೊಂದು ಧರ್ಮಕ್ಕೆ ಬದ್ಧನಾಗಿಯೇ ಬದುಕುತ್ತಿರುತ್ತಾನೆ. ಹಾಗಾಗಿಧರ್ಮ ಎನ್ನುವುದು ಅವನ ಅಂತರಂಗದ ಅವಶ್ಯಕತೆಯಾಗಿದೆ. ಒಂದೊಂದು ಜಾತ್ರೆಯು ಒಂದೊಂದು ಧರ್ಮದ ಪ್ರೇರಣೆಯ ಹಿನ್ನೆಲೆಯಲ್ಲಿ ರೂಪಗೊಂಡಿರುತ್ತವೆ. ಆದರೆ ಜಾತ್ರೆ ಅದೇ ಧರ್ಮಕ್ಕೆ ಮಾತ್ರ ಸೀಮಿತವಾಗದೇ ಸಾಮರಸ್ಯದ ಕೊಂಡಿಆಗುತ್ತದೆ. ಏಕೆಂದರೆ ಜಾತ್ರೆಯಲ್ಲಿ ಎಲ್ಲ ಜನಾಂಗದವರು ಭಾಗವಹಿಸಿ ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತಾರೆ. ಹಿನ್ನೆಲೆಯಲ್ಲಿ ಜಾತ್ರೆ ಒಂದು ಸಂಕೀರ್ಣ ಸಾಂಸ್ಕೃತಿಕ, ಸರ್ವಧರ್ಮ, ಸಮ್ಮಿಳಿತ, ಮೂಲೋದ್ದೇಶದ ಆಧಾರದ ಮೇಲೆ ಜರುಗುತ್ತದೆ. ಜಾತ್ರೆ ಹಲವಾರು ದೃಷ್ಟಿಯಿಂದ ಹಳ್ಳಿಗರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರತಿಯೊಂದು ಜಾತ್ರೆಯು ಎಲ್ಲರನ್ನೂ ರಂಜಿಸುವ ಸಮಷ್ಟಿ ಬದುಕಿನ ಒಂದು ಸಮನ್ವಿತವಾದ ಸಾಂಸ್ಕೃತಿಕ ಮೊತ್ತವಾಗಿದೆ.

    ಇಂತಹ ಒಂದು ಜಾತ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಡೊಂಬರಮತ್ತೂರ ಗ್ರಾಮದಲ್ಲಿದೆ. ಗ್ರಾಮಕ್ಕೆ ತನ್ನದೇ ಆದಂತ ಚಾರಿತ್ರಿಕ ಐತಿಹ್ಯಗಳಿದ್ದು, ಊರಿನ ಹಿರಿಯರು ಈಗಲೂ ಹೇಳುವ ಐತಿಹ್ಯಗಳನ್ನು ಇಲ್ಲಿ ಕಾಣಬಹುದು.

ಐತಿಹ್ಯ-:ಮತ್ತೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಗ್ರಾಮದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದಾಗ ಗ್ರಾಮದೇವತೆಯಾದ ಬಸವಣ್ಣನು ಕೋಣನತಂಬಗಿ ಎಂಬ ಗ್ರಾಮದ ಬಳಿ ಪೂರ್ವ ದಿಕ್ಕಿನತ್ತ ಹರಿಯುತ್ತ ಉತ್ತರಕ್ಕೆ ಸಾಗಿ, ಮುಂದೆ ಪಶ್ಚಿಮದ ಕಡೆ ಹರಿಯುತ್ತಿತ್ತಂತೆ, ಹಾಗೇ ಅದು ನೇರವಾಗಿ ಉತ್ತರ ದಿಕ್ಕಿನೆಡೆಗೆ ಹೊರಟಾಗ ಗದ್ದೆಯಲ್ಲಿದ್ದಂಥ ಬಸವಣ್ಣನು ಗಂಗಾಮಾತೆಗೆತಂಗೀ ಗಂಗವ್ವಾ... ಊರಿನ ಜನಕ್ಕೆ ಬರಗಾಲವೊಡ್ಡದೇ ಕರುಣೆ ತೋರಿಸವ್ವಾ...’ ಎಂದು ಕೂಗಿ ಬೇಡಿಕೊಂಡನಂತೆ. ಆಗ ಗಂಗೆಯುಅಣ್ಣಾ... ಯಾವ ಕಡೆ ಹರಿಯಲಿ?’ ಎಂದಾಗಪೂರ್ವದ ಕಡೆ ಎಂದು ತಲೆ ಅಲ್ಲಾಡಿಸುತ್ತ ಸನ್ನೆ ಮಾಡಿದನಂತೆ. ಆಗ ವರದಾಯಿನಿಯಾದ ವರದೆಯು ಬಸವಣ್ಣನಿದ್ದಲ್ಲಿಗೇ ಬಂದು ಅವನ ಪಾದ ತೊಳೆದು, ಗ್ರಾಮದ ಪಕ್ಕದಲ್ಲೇ ಹಾಯ್ದು ಹೋದಳಂತೆ. ಹೀಗೆ ವರದೆಗೆ ದಾರಿ ತೋರಿಸಿದ ಬಸವಣ್ಣನ ಮುಖವು ಈಗಲೂ ಸಹ ಒಂದು ಕಡೆ ವಾಲಿದೆ ಎಂದು ಜನ ಹೇಳುತ್ತಾರೆ.

ಐತಿಹ್ಯ-: ಊರ ಗೌಡನ ಕನಸಿನಲ್ಲಿ ಬಂದ ಗಂಗಾ ದೇವಿಯುನಾನು ಒಮ್ಮೊಮ್ಮೆ ಮೈದುಂಬಿ ಹರಿಯುವಾಗ ಎಲ್ಲಿ ನಿಮಗೆ ಹಾನಿಯಾಗುವುದೋ ಏನೋ... ಕಾರಣ ನೀವೆಲ್ಲರೂ ಈ ಸ್ಥಳವನ್ನು ಬಿಟ್ಟು ದೂರದಲ್ಲಿ ಕಾಣುವ ಹೊಳೆ ಮಗ್ಗುಲಿನ ದಿಬ್ಬದ ಮೇಲೆ ಹೋಗಿ ನೆಲೆಸಿರಿ. ಸ್ಥಳ ಭಯ-ಭಕ್ತಿಯ ಸ್ಥಾನವಾಗಿದ್ದು, ಅಲ್ಲಿ ನೆಲೆಸುವ ಹಾಗೂ ಅಲ್ಲಿಗೆ ಬಂದು ಹೋಗುವ ಜನರಿಗೆ ಯಾವುದಕ್ಕೂ ಕೊರತೆಯುಂಟಾಗದು, ಎಲ್ಲರೂ ಸುಖದಿಂದಿರುವರು ಎಂದು ಹೇಳಿದಳಂತೆ. ಗಂಗೆಯ ಆಜ್ಞೆಯಂತೆ ಮರುದಿನದಿಂದಲೇ ಎಲ್ಲರೂ ದಿಬ್ಬದ ಮೇಲೆ ಬಂದು ನೆಲೆಸಿದರು. ಹಾಗೆಯೇ ಬಸವಣ್ಣನ ಮೂರ್ತಿಯನ್ನು ಸಹ ಎತ್ತಿಕೊಂಡು ಬಂದು ತಾವು ನೆಲೆಸಿದ ಹೊಳೆ ಪಕ್ಕದ ದಿಬ್ಬದ ಮೇಲೆ ಪತಿಷ್ಠಾಪಿಸಿದರು. ಅಂದಿನಿಂದ ಊರಿಗೆಹೊಳೆಮತ್ತೂರು ಎಂದು ಕರೆಯಲು ಪ್ರಾರಂಭಿಸಿದರು.

ಐತಿಹ್ಯ-:ಹೊಳೆಮತ್ತೂರು ಎಂದಿದ್ದ ಹೆಸರು ಮುಂದೆ ಕೆಲ ವರ್ಷಗಳ ನಂತರಡೊಂಬರಮತ್ತೂರು ಎಂದು ಬದಲಾದುದಕ್ಕೆ ಮತ್ತೊಂದು ಕಥೆಯನ್ನು ಹಿರಿಯರು ಹೇಳುತ್ತಾರೆ.

    ತುಂಬಾ ವರ್ಷಗಳ ಬಳಿಕ ಗ್ರಾಮಕ್ಕೆ ಊರೂರು ಅಲೆದು ತಮ್ಮ ಚಮತ್ಕಾರ, ಕಸರತ್ತುಗಳನ್ನು ತೋರಿಸಿ ಉಪಜೀವನ ಸಾಗಿಸುವದೊಂಬರು, ‘ಡಂಬರು, ‘ಡೊಂಬರು ಎಂತಲೂ ಕರೆಯಿಸಿಕೊಳ್ಳುವಡೊಂಬರಾಟದವರು ಬಂದರಂತೆ, ಬಂದವರು ಬಸವಣ್ಣನ ದೇವಸ್ಥಾನದ ಪಕ್ಕದಲ್ಲೇ ಜೋಪಡಿ ಹಾಕಿಕೊಂಡು ಉಳಿದುಕೊಂಡಿದ್ದರು. ರಾತ್ರಿ ತಮ್ಮ ಆಟವನ್ನು ತೋರಿಸಲೆಂದು ದೇವಸ್ಥಾನದ ಮುಂದಿನ ಜಾಗೆಯಲ್ಲಿ ಎರಡು ಕಂಬ ನಿಲ್ಲಿಸಿ, ಅದಕ್ಕೆ ತಂತಿಯನ್ನು ಕಟ್ಟಿ, ಅದರ ಮೇಲೆ ನಡೆಯುವ ಸಾಹಸವನ್ನು ಡಂಬರಾಟದ ಹುಡುಗಿ ಪ್ರದರ್ಶಿಸುತ್ತಿದ್ದಳು. ತುಂಬಾ ಜನ ನೆರೆದಿದ್ದರು. ಆಗ ಹುಡುಗಿ ತಂತಿಯ ಮೇಲೆ ನಡೆಯುತ್ತಿದ್ದಾಗ ಏನಾಯಿತೋ ಏನೋ ಎರಡೂ ಕಂಬದ ತುದಿಗೆ ಕಟ್ಟದ್ದ ತಂತಿ ಒಮ್ಮೆಲೇ ಹರಿದು ಕೆಳ ಬಿತ್ತು. ಆಶ್ಚರ್ಯವೆಂದರೆ ತಂತಿ ಹರಿದರೂ ಹುಡುಗಿ ಮಾತ್ರ ಕೆಳಗೆ ಬೀಳದೇ ಗಾಳಿಯಲ್ಲಿ ತೇಲುತ್ತ ಹಾಗೇ ನಿಂತಿದ್ದಳಂತೆ. ಹುಡುಗಿ ಅತ್ತಿತ್ತ ಜನರನ್ನು ನೋಡುತ್ತಾ ಬಸವಣ್ಣ ದೇವರತ್ತ ಕೈ ಮುಗಿಯುತ್ತಭಲೇ... ಇವತ್ತಿನ ಡಂಬರಾಟದೊಳಗ ಹೊಸಾ ಅನುಭವ ತೋರಿಸಿದ ಮತ್ತೂರು ಇದು, ಡಂಬರ ಮತ್ತೂರು ಇದು ಎಂದು ನೆರೆದವರೆಲ್ಲರಿಗೂ ಕೇಳಿಸುವಂತೆ ಕೂಗಿದಳಂತೆ. ಆವೊತ್ತಿನಿಂದಹೊಳೆಮತ್ತೂರು ಎಂಬುದುಡಂಬರಮತ್ತೂರು ಎಂದಾಗಿ, ಬರಬರುತ್ತ ಡಂಬರಮತ್ತೂರು>ಡೊಂಬರಮತ್ತೂರು ಎಂದು ಹೆಸರಾಯಿತೆಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಡೊಂಬರಮತ್ತೂರ ಗ್ರಾಮವು ಜಿಲ್ಲಾ ಕೇಂದ್ರದಿಂದ ೨೫ ಕಿ. ಮೀ. ದೂರವಿದ್ದು, ಸುಮಾರು ೪೦೦೦ ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಹಲವಾರು ಜಾತಿ ಜನಾಂಗದ ಬಾಂಧವರು ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಇಲ್ಲಿನ ಜನ ಪರಿಶ್ರಮ, ಶ್ರದ್ಧೆ, ತ್ಯಾಗ, ತಾಳ್ಮೆ, ಅನುಕಂಪ, ಸದಾಚಾರಗಳಿಗೆ ಹೆಸರಾದವರಲ್ಲದೇ ಶಾಂತಿ ಪ್ರಿಯರೂ, ಧರ್ಮ ಸಹಿಷ್ಣುತೆಯಿಂದ ಬಾಳುವವರಾಗಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯುಳ್ಳವರಾಗಿರುವುದರಿಂದ ಹಿಂದಿನಿಂದಲೂ ಇಲ್ಲಿದಾನ, ಧರ್ಮ, ಹಬ್ಬ, ಜಾತ್ರೆ, ಆಚರಣೆಗಳು, ಉತ್ಸವಗಳು ಜರುಗುತ್ತಲೇ ಇರುತ್ತವೆ.

    

ಹಾಗಾಗಿ ಇದೇ ೨೦೨೨ರ ಎಪ್ರಿಲ್ ೦೯ನೇ ತಾರೀಖಿನಿಂದ ೧೪ರ ವರೆಗೆ ಶ್ರೀ ಬಸವೇಶ್ವರ ದೇವರ ಜಾತ್ರೆಯು ಸಂಭ್ರಮ ಸಡಗರದಿಂದ ಜರುಗಲಿದೆ. ತನ್ನಿಮಿತ್ಯ ಲೇಖನ.

ಯುಗಾದಿ ಪಾಡ್ಯದಿಂದ ಚೈತ್ರ ಶುದ್ಧ ಸಪ್ತಮಿ ತಿಥಿಗೆ ಅಂದರೆ, ಜಾತ್ರೆಯ ಪ್ರಾರಂಭದ ದಿನ (೦೯-೦೪-೨೦೨೨) ಶನಿವಾರ ರಾತ್ರಿಹೂವಿನ ತೇರು ಅಥವಾಹೂವಿನ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಹೂವಿನ ತೇರು ಅಥವಾ ಗಚ್ಚಿನ ತೇರನ್ನು ಶೃಂಗಾರಗೊಳಿಸುತ್ತಾರೆ. ಮನೆಗಳೆಲ್ಲವೂ ಸುಣ್ಣ ಬಣ್ಣ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಊರು ಬಹು ಶೃಂಗಾರದಿಂದ ಕಂಗೊಳಿಸುತ್ತಿವೆ.

ಜಾತ್ರೆಯ ಮೊದಲ ದಿನದ ರಾತ್ರಿ ಶ್ರೀಬಸವೇಶ್ವರ (ಬಸವಣ್ಣ)ನನ್ನುಮದುಮಗನನ್ನಾಗಿ ಸಿಂಗರಿಸಿ, ಕ್ಷೀರ ಮತ್ತು ಜಲಾಭಿಷೇಕ ಮಾಡುತ್ತಾರೆ. ಜೊತೆಗೆ ಬಸವೇಶ್ವರನ ಪಕ್ಕದಲ್ಲಿರುವ ಈಶ್ವರನಿಗೂ ಅಭಿಷೇಕ ಜರುಗುವದು.

ಎರಡನೇ ದಿನ (೧೦-೦೪-೨೦೨೨) ಚೈತ್ರ ಶುದ್ಧ ನವಮಿಯ ರವಿವಾರ ಸಾಯಂಕಾಲ ಘಂಟೆಗೆ ಶ್ರೀ ಬಸವೇಶ್ವರ ದೇವರ ಜಾತ್ರಾ ರಥೋತ್ಸವ ಪ್ರಾರಂಭವಾಗುತ್ತದೆ. ಇದಕ್ಕೆ ದೊಡ್ಡತೇರು ಎಂತಲೂ ಕರೆಯುವರು. ಅಂದುಶ್ರೀ ರಾಮನವಮಿಯೂ ಸಹ ಇರುತ್ತದೆ.

ದೊಡ್ಡತೇರಿಗೆಬಾಬದಾರಮನೆಯಿಂದ ದೇವರು, ಉತ್ಸವ ಮೂರ್ತಿ, ಪಲ್ಲಕ್ಕಿ, ಎಡೆ, ಆರತಿ, ಕಳಶ ಮುಂತಾದವುಗಳನ್ನು ತಂದು ಅರ್ಪಿಸುತ್ತಾರೆ. ನಂತರ ಬಾಬದಾರ ಮನೆಯವರು, ಪೂಜಾರಿಗಳು ಹಾಗೂ ಊರಿನ ಪ್ರಮುಖರು ತೇರಿಗೆ ಪೂಜೆ ಸಲ್ಲಿಸಿ, ಎಡೆ ಹಿಡಿದು ಕಾಯಿ ಒಡೆದು ಪೂಜಿಸಿದ ನಂತರ ತೇರನ್ನು ಭಕ್ತ ಸಮೂಹವು ಎಳೆಯಲು ಶುರು ಮಾಡುತ್ತದೆ.

ತೇರೆಳೆಯುವಾಗ ಜಾತಿ-ಮತ-ಪಂಥದ ಭೇದ ಸಂಪೂರ್ಣವಾಗಿ ಅಳಿಸಿಹೋಗುವ ಲಕ್ಷಣಗಳನ್ನು ತುಂಬ ಮುಖ್ಯವೆಂದು ಭಾವಿಸಬೇಕಿದೆ. ತೇರುರಥ ಬೀದಿಯಲ್ಲಿ ಸಾಗುತ್ತಾ ದೇವಸ್ಥಾನದ ಕಡೆ ಹೊರಟಾಗ ಅಲ್ಲಿ ನೆರೆದಂಥ ಭಕ್ತರು ಬಾಳೆ ಹಣ್ಣು, ಉತ್ತತ್ತಿ, ನಿಂಬೆ ಹಣ್ಣು, ಅಡಿಕೆ, ಬೆಲ್ಲ, ನಾಣ್ಯ ಮುಂತಾದವನ್ನು ಭಕ್ತಿ, ಗೌರವ ಸೂಚಕವಾಗಿ ತೇರಿನತ್ತ ಎಸೆಯುತ್ತಾರೆ.

ಭಕ್ತರುತೇರು ಎಳೆದುಕೊಂಡು ದೇವಸ್ಥಾನದ ಕಡೆ ಸಾಗುವಾಗ ತೇರಿನ ಮುಂದೆ ಮುಂದೆ ಪುರವಂತರು, ನಂದಿಧ್ವಜ,  ಭಜನಾ ಮೇಳ, ಆಧುನಿಕ ಜಾಂಝ್ ಮೇಳ, ಬಾಜಾ-ಭಜಂತ್ರಿಯವರು ತಮ್ಮ ಕಲಾ ಪ್ರದರ್ಶನ ನೀಡುತ್ತ ಸಾಗುತ್ತಿರುತ್ತಾರೆ. ಜೊತೆಗೆ ಊರಿನ ಸುಮಂಗಲೆಯರು ಆರತಿಯೊಂದಿಗೆ ಭಕ್ತಿಯಿಂದ ಪಾಲ್ಗೊಂಡಿರುತ್ತಾರೆ.

ಪುರವಂತರು ವೀರಗಾಸೆ ಕುಣಿತವನ್ನು ಪ್ರದರ್ಶಿಸುತ್ತ ದೇವಸ್ಥಾನದ ಮುಂದೆ ಹಾಕಿದಂಥ ಅಗ್ನಿಕುಂಡಲದಲ್ಲಿ ಹಾಯುತ್ತಾರೆ. ಪುರವಂತರು ಅಗ್ನಿಕುಂಡಲದಲ್ಲಿ ಹಾಯ್ದು ಹೋದ ನಂತರ ಜಾತ್ರೆಗೆ ಬಂದ ಭಕ್ತರು ಅಗ್ನಿಕುಂಡದಲ್ಲಿ ಹಾಯ್ದು ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳುತ್ತಾರೆ. ತೇರು ನೋಡಿಕೊಂಡು ಪರ ಊರಿನ ಭಕ್ತರು ಹಣ್ಣು ಕಾಯಿ ಮಾಡಿಸಿಕೊಂಡು ಊರಿಗೆ ತೆರಳುತ್ತಾರೆ. ಅದೇ ದಿನ ರಾತ್ರಿ ಪುರಾಣ ಪ್ರವಚನಳು ನೆರವೇರುತ್ತವೆೆ.

ಮೂರನೇ ದಿನ (೧೧-೦೪-೨೦೨೨) ಅಂದರೆ ಚೈತ್ರ ಶುದ್ಧ ದಶಮಿಯ ಸೋಮವಾರದಂದುಐಗುಳು ಎಡೆ ಕೊಡುವುದು ಮಾಡುತ್ತಾರೆ. ‘ಐಗುಳು ಎಂಬುದು ಬಹುಷಃಅಯ್ಯಗಳು ಎಂದಿರಬಹುದು. ‘ಅಯ್ಯ ಎಂದರೆಅಪ್ಪ. ಅಂದರೆಐದು ಜನ ಪೂಜ್ಯರಿಗೆ ಎಡೆ ಕೊಡುವುದು ಎಂದಾಗಿರಲೂಬಹುದು. ಒಟ್ಟಿನಲ್ಲಿ ಊರಿನವರು ಕರೆಸಿದಂತ ಪೂಜ್ಯರಿಗೆ ಒಂದೊಂದು ಮನೆಯವರೂ ತಮ್ಮ ಮನೆಯಲ್ಲಿ ಮಾಡಿದ ವಿಶೇಷ ಅಡುಗೆಯನ್ನು ಮೊದಲುಐಗಳು ಎಡೆ ಕೊಟ್ಟ ನಂತರ ಮನೆಯವರು ಊಟ ಮಾಡುವುದು ರೂಢಿಯಲ್ಲಿದೆ.

ಅಂದು ಸಾಯಂಕಾಲಓಕಳಿ ಉತ್ಸವ, ‘ಕಡಬಿನ ಕಾಳಗ ಇರುತ್ತದೆ. ಊರಿನಲ್ಲಿ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿ ಆಡುವ ಪದ್ಧತಿಯಿಲ್ಲ; ಆದ್ದರಿಂದ ಜಾತ್ರೆಯ ಸಂದರ್ಭದಲ್ಲಿಯೇ ಓಕುಳಿ ಆಡುತ್ತಾರೆ. ಜೊತೆಗೆಎತ್ತುಗಳ ಮೆರವಣಿಗೆಯೂ ಸಹ ಇರುತ್ತದೆ.

ಇದೇ ದಿನ ರಾತ್ರಿ ಜಾತ್ರೆಯ ಅಂಗವಾಗಿ ಆರ್ಕೆಸ್ಟ್ರಾ ಮತ್ತು ಡಿಜೆ ಯವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ನಾಲ್ಕನೇ ದಿನವೂ ಎಂದಿನಂತೆ ಜಾತ್ರೆ ನೆರೆದಿರುವುದು. ದಿನಾಂಕ: ೧೨ ರಿಂದ ೧೪ರ ವರೆಗೆ ನಡೆಯುವಜಂಗಿ ನಿಕಾಲಿ ಕುಸ್ತಿಗಳನ್ನು ನೋಡಲು ದೇವಸ್ಥಾನದ ಮುಂದುಗಡೆ ಇರುವ ಹೊಲದಲ್ಲಿ ನಿರ್ಮಿಸಿದಕುಸ್ತಿ ಕಣದಲ್ಲಿ ಜನ ನೆರೆಯುತ್ತಾರೆ. ಕುಸ್ತಿಗಳು ಮೂರು ದಿನಗಳ ಕಾಲ ನಡೆಯುತ್ತವೆ. ಕುಸ್ತಿಯಾಡಲು ಬೇರೆ ಬೇರೆ ಜಿಲ್ಲೆ, ಊರುಗಳಿಂದ ಪ್ರಸಿದ್ಧ ಪೈಲವಾನರು ಆಗಮಿಸುತ್ತಾರೆ. ಕಡೆ ಕುಸ್ತಿಯ ದಿನ ವಿಜೇತ ಕುಸ್ತಿಪಟುಗಳಿಗೆ ಸನ್ಮಾನಿಸುವ ಮುಖಾಂತರ ಜಾತ್ರೆಗೆ ತೆರೆ ಬೀಳುತ್ತದೆ.

                                                                                                            -ಡಾ.ರಾಜಶೇಖರ ಚಂ.ಡೊಂಬರಮತ್ತೂರ

                                                                                                           Mob : 9591703777

ಮಂಗಳವಾರ, ನವೆಂಬರ್ 16, 2021

ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರಾ ಮಹೋತ್ಸವ

ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರಾ ಮಹೋತ್ಸವ

ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಹಲವಾರು ಧರ್ಮಗಳು ತಮ್ಮದೆಯಾದ ನಂಬಿಕೆ, ಸಂಪ್ರದಾಯ, ಆಚರಣೆ, ಜಾತ್ರೆ, ಉತ್ಸವಗಳನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿವೆ. ಇವುಗಳು ಜನಪದರ ಸಾಂಸ್ಕೃತಿಕ ಪರಂಪರೆಗೆ ಪ್ರಮುಖ ಆಧಾರಸ್ತಂಭಗಳಾಗಿರುವುದರಿಂದ ಗ್ರಾಮೀಣ ಬದುಕಿನ ಜೀವಂತ ನಾಡಿಮಿಡಿತಗಳಾಗಿದ್ದು, ಬಹುಮುಖಿ ಸಾಂಸ್ಕೃತಿಕ ಜೀವನಕ್ಕೆ ಕನ್ನಡಿಯಾಗಿವೆ. ಒಂದೊಂದು ಗ್ರಾಮದಲ್ಲಿ ನಡೆಯುವ ಒಂದೊಂದು ಜಾತ್ರೆಗಳು ಸಾಮಾಜಿಕ, ಧಾರ್ಮಿಕ ಹಾಗೂ ಕಲಾತ್ಮಕ ಬದುಕಿನಂಥ ಹಲವಾರು ದೃಷ್ಟಿಯಿಂದ ಹಳ್ಳಿಗರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ.

ಇಂತಹ ಒಂದು ಜಾತ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಈಚಲಯಲ್ಲಾಪುರ ಗ್ರಾಮದಲ್ಲಿ ಇದೇ ದಿನಾಂಕ ೨೩.೧೧.೨೦೨೧ರ ಮಂಗಳವಾರ ದಿವಸ ಬಹು ವಿಜೃಂಭಣೆಯಿಂದ ಜರುಗುತ್ತಲಿದೆ. ತನ್ನಿಮಿತ್ಯ ಈ ಲೇಖನ.

ಜಿಲ್ಲಾ ಕೇಂದ್ರದಿಂದ ಈಶಾನ್ಯಕ್ಕೆ ೨೨ ಕಿ.ಮೀ. ದೂರ ಹಾಗೂ ತಾಲೂಕು ಕೇಂದ್ರದಿAದ ಪೂರ್ವಕ್ಕೆ ೧೬ ಕಿ.ಮೀ ದೂರದಲ್ಲಿರುವ ಈಚಲಯಲ್ಲಾಪುರ ಗ್ರಾಮವು ತನ್ನದೇ ಆದ ಪ್ರಕೃತಿ ವೈಶಿಷ್ಟವನ್ನು ಹೊಂದಿದ್ದು ಮಲೆನಾಡಿನಂತೆ ಭಾಸವಾಗುತ್ತದೆ.  ಮನೆಗಳೇ ಕಾಣಿಸದಂತಹ ದಟ್ಟ ಹಸಿರು, ಪಕ್ಕದಲ್ಲೇ ಮೈದುಂಬಿ ನಿಂತ ವಿಶಾಲವಾದ ಕೆರೆ ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ.

ಗಿಡ-ಮರಗಳೊಟ್ಟಿಗೆ ವಾಸಿಸುತ್ತ ಅವುಗಳ ಜೊತೆಗಿನ ಭಾವಪೂರ್ಣ ಸಂಬAಧವನ್ನು ಉಳಿಸಿಕೊಂಡು ಬಂದಿರುವ ನಮ್ಮ ಜನಪದರು ಅವುಗಳಲ್ಲೇ ದೈವತ್ವವನ್ನು ಕಂಡುಕೊAಡವರು. ಇವರು ವೃಕ್ಷದೇವತೆಯನ್ನು ಮರೆವ್ವ, ಕರೆವ್ವ,  ಮರದವ್ವ, ದ್ಯಾಮವ್ವ, ದುರಗವ್ವ, ಎಲ್ಲವ್ವ, ಬನಶಂಕರಿ ಎಂದು ಗ್ರಾಮದೇವತೆಯೊಡನೆ ಅಭೇದ ಕಲ್ಪಿಸಿ ಪೂಜಿಸುತ್ತಾರೆ. ಗ್ರಾಮದೇವತೆಯ ಒಂದು ಸ್ವರೂಪವೇ ಮರದಮ್ಮ ಆಗಿರುವುದರಿಂದ ಊರಿನ ಈಶಾನ್ಯ ದಿಕ್ಕಿಗೆ ಇರುವ ವಿಶಾಲ ಬಯಲಿನಲ್ಲಿರುವ ಪುಟ್ಟ ನೀರಿನ ಹೊಂಡ, ಪಕ್ಕದಲ್ಲಿದ್ದ ಬೇವಿನಮರದ (ಮರದ+ಅಮ್ಮ=ಮರದಮ್ಮ) ಅಡಿಯಲ್ಲಿ ಸುಮಾರು ವರ್ಷಗಳಿಂದ ಪೂಜಿಸಿಕೊಂಡು ಬಂದಿರುವ ದೇವತೆಯೇ ‘ಶ್ರೀ ಮರದಮ್ಮ’. ಈ ದೇವತೆಯು ಬೇಡಿ ಬಂದ ಭಕ್ತರಿಗೆ ವರ ನೀಡುವ ವರದಾಯಿನಿ, ಸಂತಾನ ಫಲ ಕರುಣಿಸುವ ಮಾತೃ ಹೃದಯಿ, ಸಕಲ ಸಂಪತ್ತನ್ನು ದಯಪಾಲಿಸುವ ಕರುಣಾಮಯಿಯಾಗಿ ಭಕ್ತ ಸಂಕುಲವನ್ನು ಸಲಹುತ್ತಿದ್ದಾಳೆ.        
                                                                                                                         
 ಗ್ರಾಮದೇವತೆ ಶ್ರೀ ಮರದಮ್ಮದೇವಿ
    
ಈ ಗ್ರಾಮದಲ್ಲಿ ಹಲವಾರು ಜಾತಿ-ಜನಾಂಗದ ಬಾಂಧವರು ಭಾವೈಕ್ಯತೆಯಿಂದ ಬಾಳುತ್ತಿದ್ದು, ಪರಿಶ್ರಮ, ಶ್ರದ್ಧೆ, ತ್ಯಾಗ, ತಾಳ್ಮೆ, ಅನುಕಂಪ, ಸದಾಚಾರಗಳಿಂದ ಶಾಂತಿ ಪ್ರಿಯರೂ, ಧರ್ಮ ಸಹಿಷ್ಣುಗಳೂ ಆಗಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯುಳ್ಳವರು ಆಗಿರುವುದರಿಂದ ಹಿಂದಿನಿAದಲೂ ಇಲ್ಲಿ ದಾನ, ಧರ್ಮ, ಹಬ್ಬ, ಜಾತ್ರೆ, ಆಚರಣೆಗಳು, ಉತ್ಸವಗಳು ಜರುಗುತ್ತಲೇ ಇರುತ್ತವೆ. ಜಾತ್ರೆ ನಡೆಯುವ ದಿನವನ್ನೂ ಊರಿನ ಜನತೆಯೇ ನಿರ್ಧರಿಸುತ್ತಿದ್ದು, ಕಾರ್ತಿಕ ಮಾಸದಲ್ಲಿ ಬರುವ ‘ಗೌರಿ ಹುಣ್ಣಿಮೆ’ಯ ನಂತರದ ಮಂಗಳವಾರವನ್ನು ಜಾತ್ರೆಯ ದಿನವೆಂದು ನಿಶ್ಚಯಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ೨೩.೧೧.೨೦೨೧ ರ ಮಂಗಳವಾರ ದಿವಸ ಗ್ರಾಮದೇವತೆ ಶ್ರೀ ಮರದಮ್ಮದೇವಿಯ ಜಾತ್ರೆಯು ವಿಜೃಂಭಣೆಯಿAದ ನಡೆಯಲಿದೆ.

ತೊಟ್ಟಿಲು ಜೀಕುಗಳು, ದಿನಸಿ ಅಂಗಡಿಗಳು, ಚಹಾದಂಗಡಿಗಳು, ಮಕ್ಕಳಾಟಿಕೆ ವಸ್ತುಗಳ ಮಾರಾಟಗಾರರು, ಮಣಿಗಾರರು, ಹಣ್ಣು-ಕಾಯಿ, ಹೂಮಾಲೆ ಮಾರುವವರು ಹಾಗೂ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ದಾವಣಗೆರೆ, ಗದಗ ಮುಂತಾದ ಜಿಲ್ಲೆಗಳಿಂದ ಭಕ್ತರು ಜಾತ್ರೆಗೆ ಮಂಗಳವಾರ ಮುಂಜಾನೆಯೇ ಬಂದು ದೇವಸ್ಥಾನದ ವಿಶಾಲ ಜಾಗದಲ್ಲಿ ಬೀಡು ಬಿಟ್ಟಿರುತ್ತಾರೆ.

ದಿನಾಂಕ ೨೩.೧೧.೨೦೨೧ ರ ಮಂಗಳವಾರ ದಿವಸ ಸಾಯಂಕಾಲ ೪ ಘಂಟೆಗೆ ಊರೊಳಗಿಂದ ಭಜನೆ, ಡೊಳ್ಳು, ಬಾಜಾ ಭಜಂತ್ರಿ, ಝಾಂಜ್ ಮೇಳ ಮುಂತಾದ ಜನಪದ ವಾದ್ಯ ವೈಭವಗಳೊಂದಿಗೆ ದೇವಿಯ ಮೆರವಣಿಗೆ ದೇವಸ್ಥಾನದ ಕಡೆಗೆ ಹೊರಡುವುದು. ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ಮೆರವಣಿಗೆಯ ಜೊತೆ ದೇವಿಯ ಸನ್ನಿಧಾನವನ್ನು ತಲುಪಿ ಹೂವಿನ ಹಾರಗಳನ್ನು ಹಾಕಿ, ಎಲೆ ಸೇವೆ (ವೀಳ್ಯೆದೆಲೆ) ಮಾಡಿ ಸಿಹಿ ಪದಾರ್ಥದ ಎಡೆಯನ್ನು ಅರ್ಪಿಸುತ್ತಾರೆ.
ದೇವಿಗೆ ಎಲೆ ಸೇವೆ

ರಾತ್ರಿ ೮ ಘಂಟೆಯಿಂದ ಅಹೋ ರಾತ್ರಿ ದೇವಸ್ಥಾನದ ಆವರಣದಲ್ಲಿಯೇ ಎಲ್ಲರೂ ಬಿಡಾರ ಹೂಡಿದ್ದು, ಜಾತ್ರೆಯ ವಿಶೇಷ ಅಡಿಗೆ ತಯಾರಿಸುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಡೊಳ್ಳಿನ ಕೈಪೆಟ್ಟು, ಡೊಳ್ಳಿನ ಪದ, ಗೀಗೀ ಪದ, ಲಾವಣಿ ಪದ, ಭಜನಾ ಪದ, ಹೆಜ್ಜೆಕುಣಿತ ಮುಂತಾದ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗುತ್ತವೆ.

ಬುಧವಾರ ಪ್ರಾತಃಕಾಲ ೨ಘಂಟೆಗೆ ಪೂಜಾರಿಕೆಯವರ ಮನೆಯಿಂದ ತಂದ ದೇವಿಯ ಉತ್ಸವಮೂರ್ತಿಯನ್ನು ಹಾಗೂ ಮಾರಿಕಾಂಬೆಯ ಉತ್ಸವ ಮೂರ್ತಿಯನ್ನೂ ಬಸವಣ್ಣದೇವರ ದೇವಸ್ಥಾನದ ಪಲ್ಲಕ್ಕಿಯಲ್ಲಿಟ್ಟು, ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಓಣಿ ಓಣಿಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಭಕ್ತರು ದೀರ್ಘದಂಡ ನಮಸ್ಕಾರ, ಉರುಳು ಸೇವೆ ಮಾಡಿ ಹರಕೆ ತೀರಿಸುತ್ತಾರೆ. ಹೂಬಾಣ, ಸಿಡಿಮದ್ದುಗಳನ್ನು ಹಾರಿಸಿ ಜನರು ಸಂಭ್ರಮಿಸುತ್ತಾರೆ. ಬೆಳಗಿನ ೫ರ ಜಾವದಲ್ಲಿ ದೇವಸ್ಥಾನ ತಲುಪಿದ ನಂತರ ಪಲ್ಲಕ್ಕಿಯನ್ನು ದೇವಸ್ಥಾನದ ಪ್ರಾಂಗಣದಲ್ಲಿಟ್ಟು ಪೂಜಿಸಲಾಗುತ್ತದೆ. ತಯಾರಿಸಿದ ವಿಶೇಷ ಅಡುಗೆಯನ್ನು ಎಲ್ಲರೂ ಎಡೆ ಮಾಡಿತಂದು ದೇವಿಗೆ ಅರ್ಪಿಸುತ್ತಾರೆ.

ಸೂರ್ಯೋದಯಕ್ಕೆ ಮುಂಚೆಯೇ ಎಡೆಯನ್ನು ಒಟ್ಟುಗೂಡಿಸಿ ದೇವಸ್ಥಾನದ ಮೇರೆಯವರೆಗೂ ಚೆರಗಚೆಲ್ಲುತ್ತಾರೆ. ಈ ಸಮಯದಲ್ಲಿ ಪೂಜಾರಿಯ ಮೈಮೇಲೆ ದೇವಿಯು ಬಂದು ಹೇಳಿಕೆ ಹೇಳುವ ಮೂಲಕ ಭಕ್ತರ ಬೇಡಿಕೆಗಳನ್ನು ಇಡೇರಿಸುತ್ತಾಳೆಂಬ ನಂಬಿಕೆ ಬಲವಾಗಿದೆ.

ದಿನಾಂಕ ೨೪.೧೧.೨೦೨೧ ರ ಬುಧವಾರ ದಿವಸ ಮುಂಜಾನೆ ದೇವಸ್ಥಾನದ ಆವರಣದಲ್ಲಿ ನೆರೆದಿರುವ ಎಲ್ಲ ಭಕ್ತಾದಿಗಳಿಗೆ ಅನ್ನ ಪ್ರಸಾದವಿರುತ್ತದೆ. ನಂತರ ದೇವಿಯ ಸನ್ನಿಧಾನದಿಂದ ವಾದ್ಯ ವೈಭವಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಊರೊಳಗೆಲ್ಲ ಮೆರವಣಿಗೆ ಮಾಡುವುದರೊಂದಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ.

                                                                                                                                                  -ಡಾ.ರಾಜಶೇಖರ ಚಂ.ಡೊAಬರಮತ್ತೂರ

ಗುರುವಾರ, ಜನವರಿ 28, 2021

ರಾಷ್ಟ್ರೀಯ ವಿಚಾರ ಸಂಕಿರಣ-೨೦೨೧ : ಪರಂಪರೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ

 

ಭಾರತದ ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು: ಯಶವಂತ ಸರದೇಶಪಾಂಡೆ

(ದಿನಾಂಕ:೨೮ನೇ ಜನವರಿ ೨೦೨೧)

ಭಾರತವು ಕಲೆಯಲ್ಲಿ ವೈವಿಧ್ಯತೆಯನ್ನು ಹೊಂದಿದ್ದು ಅದನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವಾಗಬೇಕು. ಬದಲಾದ ಸಂದರ್ಭದಲ್ಲಿ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ನಮ್ಮ ಪರಂಪರಾಗತ ಕಲೆಗಳನ್ನು ಕಟ್ಟುವ ಕ್ರಿಯೆ ಯುವಕರಿಂದಾಗಬೇಕೆಂದು ಎಚ್ಚರಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಹಾಗೂ ಸಂಶೋಧನೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿ  ಉದ್ಘಾಟನಾ ಮಾತುಗಳನ್ನಾಡಿದ ಯಶವಂತ ಸರದೇಶಪಾಂಡೆ ಅವರು ಮಾತನಾಡುತ್ತಾ  ನಮ್ಮ ಪರಂಪರಾಗತ ಕುಲಕಸುಬುಗಳಲ್ಲಿಯ ಜ್ಞಾನ ಮತ್ತು   ವೈಜ್ಞಾನಿಕತೆಯನ್ನು ತಿಳಿಸಿ; ಇಂಥಹವುಗಳನ್ನು ಉಳಿಸಿ ಬೆಳಿಸುವ ಕಾರ್ಯ ವಿಶ್ವವಿದ್ಯಾಲಯದಿಂದ ಅಗಬೇಕೆಂದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು  ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಅಕ್ಷರ ಜ್ಞಾನವೇ ಶ್ರೇಷ್ಠ ಎಂದು ತಿಳಿದಿದ್ದೇವೆ. ಆದರೆ ಅಕ್ಷರಸ್ಥರಕ್ಕಿಂತ ಅನಕ್ಷರಸ್ಥರ ಜ್ಞಾನ ಶ್ರೇಷ್ಠವಾದದ್ದು. ಅನಕ್ಷರಸ್ಥರ ಜ್ಞಾನಕ್ಕೆ ಗೌರವ ಕೊಡುವ ಪರಂಪರೆ ಬರಬೇಕು. ಒಂದು ಅವಕಾಶ ಸರಕಾರ ತಂದಿರುವ ಹೊಸ ಶಿಕ್ಷಣ ನೀತಿಯಲ್ಲಿದೆ  ಎಂದು ಪ್ರಶಂಸಿಸಿದರು. ಜನಪದ ಕಲಾವಿದರಾದ ಶರೀಫ್ ಮಾಕಪ್ಪನವರ ಮತ್ತು ಅವರ ತಂಡ ಹಾಡಿದ ನಾಡಗೀತೆಯೊಂದಿಗೆ ಆರಂಭಾದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸುನಂದಾ ಕಳಕನ್ನವರ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿ ಕಾರ್ಯಕ್ರಮವನ್ನು ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಪ್ರಥಮವಾಗಿ ಹಮ್ಮಿಕೊಂಡ ಉದ್ದೇಶ ಮತ್ತ ಪರಂಪರೆಯ ಮಹತ್ವವನ್ನು ತಿಳಿಸಿದರುನಂತರ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಶ್ರೀನಿವಾಸ ಬಳ್ಳಿ ಮತ್ತು ಶ್ರೀ ಹರ್ಷವರ್ಧನ ಶೀಲವಂತ ಅವರಿಂದ   ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಪನ್ಯಾಸಗಳು ನಡೆದವು.ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಎಲ್ಲರನ್ನು ಸ್ವಾಗತಿಸಿದರೆ,ಸಹಾಯಕ ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ  ಗೇಟಿಯವರು ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಧನಾತ್ಮಕ ಚಿಂತನೆ ಪ್ರಗತಿಗೆ ದಾರಿ: ರಘುನಂದನ

ಸಿಕ್ಕಂತ ಅವಕಾಶವನ್ನು  ಸರಿಯಾಗಿ ಬಳಸಿಕೊಂಡು ಅದರ ಮೂಲಕ ಪರಿಚಯವಾಗುವುದೇ ವ್ಯಕ್ತಿ ಪ್ರಗತಿ, ಅದುವೇ ಕ್ರೀಯಾತ್ಮಕತೆಯ ಚಟುವಟಿಕೆ. ನಿಟ್ಟಿನಲ್ಲಿ ದೇಶ ಭಕ್ತಿ ನಿರ್ಮಿತವಾಗಬೇಕು, ಒಂದು ಕ್ರಿಯೆ ನಮ್ಮ ಜನಪದರಲ್ಲಿದೆ. ಅವರು ಕ್ರಿಯಾತ್ಮಕ  ಬಗೆ ನೆಲ ಮೂಲವಾಗಿದ್ದು ತನ್ನ ಸುತ್ತಲದ ಪರಿಸರದಲ್ಲಿನ ವಸ್ತುಗಳನ್ನೇ ತನ್ನ ಪ್ರಗತಿಗೆ ಬಳಸಿಕೊಳ್ಳಾತ್ತಾರೆ. ಮೂಲಕ ಅವರು ತಮ್ಮತನವನ್ನು ಪ್ರತಿನಿಧಿಸುತ್ತಾರೆ ಇದು ರಾಷ್ಟ್ರೀಯತೆ ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಹಾಗೂ ಸಂಶೋಧನೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ರಘುನಂದನ ಅವರು ಸಮಾರೋಪ ಮಾತುಗಳನ್ನಾಡುತ್ತಾ  ಈಗ ಬದಲಾದ ಸಂದರ್ಭದಲ್ಲಿ ಪರಂಪರಾಗತ ಜ್ಞಾನವನ್ನು ಹೇಗೆ ಬಳಸಿಕೊಳ್ಳುಬೇಕು ಎಂಬುದನ್ನೂ  ಶೋಧಿಸಿ ಕ್ರೀಯಾತ್ಮಕಗೊಳಿಸಿಕೊಳ್ಳಬೇಕು ಮೂಲಕ ನವಭಾರತ ಕಟ್ಟಬೇಕೆಂದರು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎನ್.ಎಮ್.ಸಾಲಿ ಅವರು ಮಾತನಾಡುತ್ತಾ ಜನಪದರ ಜ್ಞಾನ ಎನ್ನುವಂತಹದು ವಿಶಾಲವಾದದ್ದು ಇದರ ಜ್ಞಾನ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ರಾಷ್ಟ್ರ ಪ್ರಜ್ಞೆಯನ್ನು ಹೊಂದಿದಂತೆಯೇ ಎಂದರು. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು  ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ನಮ್ಮ ಜನಪದರ ಅನುಭವ ಜ್ಞಾನವೇ ಒಂದು ಶಿಕ್ಷಣ. ದೇಶಿ ಶಿಕ್ಷಣಕ್ಕೆ ನಾವು ತೆರೆದುಕೊಳ್ಳಬೇಕೆಂದರು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀಮತಿ ಸುನಂದಾ ಕಳಕನ್ನವರ ಅವರು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಉತ್ತಮ ಅವರು ಅತಿಥಿಗಳನ್ನು ಪರಿಚಯಿಸಿ ಎಲ್ಲರನ್ನು ಸ್ವಾಗತಿಸಿದರು. ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರಾದ ಶಹಜಾನ ಮುದಕವಿ ಎಲ್ಲರಿಗೂ  ವಂದಿಸಿದರು. ಡಾ.ವಿಜಯಲಕ್ಷ್ಮೀ  ಗೇಟಿಯವರು ನಿರೂಪಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

                                                                                                                                                                                    ವರದಿ: ಡಾ.ನದಾಫ್ ಹೆಚ್.ಹೆಚ್ ಹತ್ತಿಮತ್ತೂರ