ಮಂಗಳವಾರ, ಡಿಸೆಂಬರ್ 10, 2019

ಕಳೆದು ಹೋದ ಮುತ್ತು-ಕವಿತೆ

ಚಿತ್ರಕೃಪೆ:ಅಂತರ್‌ಜಾಲ
ಕಳೆದು ಹೋದ ಮುತ್ತು
(ಡಾ.ರಾಜಕುಮಾರ ಅವರ ನೆನಪಿನಲ್ಲಿ)

ಮುತ್ತು ಕಳೆದು ಹೋಯಿತೊಂದು
ಮುತ್ತು ಮಾಣಿಕದಂಥ ಮುತ್ತು || ಪ ||

ಹೊತ್ತು ಹೋಗದ ಮುನ್ನ ತಾನು
ಎತ್ತ ಹೋಯಿತೇನೋ ಮುತ್ತು
ಚಿತ್ತ ಚಂಚಲ ಮಾಡಿದಂಥ || ಮುತ್ತು ||

ಹತ್ತು ಹಲವು ಬಣ್ಣಗಳನು
ಇತ್ತು ಎಲ್ಲರ ಹೃದಯಗಳಲಿ,
ಕಿತ್ತು ಕಳೆಕಸ ಗುಡಿಸಿದಂಥ || ಮುತ್ತು ||
ಚಿತ್ರಕೃಪೆ:ಅಂತರ್‌ಜಾಲ

ನಿತ್ಯ ಕಾಯಕಯೋಗಿಯಾಗಿ
ಸತ್ಯ ಶರಣರ ಹಾದಿಯೊಳಗೆ
ಮಿಥ್ಯ ಮನದಿಂ ದೂಡಿದಂಥ || ಮುತ್ತು ||

ನೆತ್ತಿ ಮೇಲಿನ ಸೂರ್ಯನಂತೆ
ಭಕ್ತಿಯಿಂದಭಿಮಾನಿಗಳಿಗೆ
ದೀಪ್ತಿಯಾಗಿ ಬೆಳಗಿದಂಥ || ಮುತ್ತು ||

ಸುತ್ತು ಕನ್ನಡ ನಾಡಿನೊಳಗೆ
ಗತ್ತು ಗಾಂಭೀರ್ಯ ವಿನಯದಿಂದಲಿ
ಮತ್ತೆ ಮತ್ತೆ ಮಿನುಗಿದಂಥ || ಮುತ್ತು ||

ಕತ್ತು ಹೊರಳಿಸಿದೆಡೆಯಲೆಲ್ಲ
ವಸ್ತುಸ್ಥಿತಿಯಲಿ ಲೀನವಾದ
ಮುತ್ತುರಾಜನೆನಿಸಿದಂಥ || ಮುತ್ತು||

                                    - ಡಾ.ರಾಜಶೇಖರ ಚಂ.ಡೊಂಬರಮತ್ತೂರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ