ಶುಕ್ರವಾರ, ಡಿಸೆಂಬರ್ 13, 2019

ಉತ್ತರ ಕರ್ನಾಟಕ ಸಂಸ್ಕೃತಿಯ ಶ್ರೇಷ್ಠ ಕಲೆ ದೊಡ್ಡಾಟ : ಪ್ರೊ. ನಾಯಕ

       ಇಂದಿನ ಆಧುನಿಕ ಜಗದಲ್ಲಿ ನಮ್ಮದೆನ್ನುವ ಬಹುಪಾಲು ಕಲೆಗಳು ಕರಗುತ್ತಾಸಾಗಿವೆ. ಅಂತವುದರಲ್ಲಿ ದೊಡ್ಡಾಟವೂ ಸಹ ಒಂದು. ಕರಾವಳಿ ಭಾಗದ ಯಕ್ಷಗಾನದಷ್ಟೇ ಸರಿಸಮನಾದ ಈ ದೊಡ್ಡಾಟ ಪ್ರಸ್ತುತ ಸಂದರ್ಭದಲ್ಲಿ ಯಕ್ಷಗಾನದ ಹಾಗೆ ಪ್ರಸಿದ್ಧಿಯನ್ನು ಪಡೆಯುವಲ್ಲಿ ವಿಫಲವಾಗಿದೆ. ಇದಕ್ಕೆ ಉತ್ತರ ಕರ್ನಾಟಕದ ನಾವು ನೀವೆಲ್ಲರೂ ಕಾರಣವಾಗಿದ್ದೇವೆ. ಈ ಅಂಶವನ್ನು ನೆನಪಿನಲ್ಲಿ ಇಟ್ಟುಕೊಂಡು ಉತ್ತರಕರ್ನಾಟಕದ ಸಂಸ್ಕೃತಿಯಲ್ಲಿ ಶ್ರೇಷ್ಠ ಕಲೆ ಎನಿಸಿಕೊಂಡು ಮೆರೆದಾಡಿದ ದೊಡ್ಡಾಟವನ್ನು ಪುನಃ ಸಕ್ರಿಯಗೊಳಿಸುವಂತಹ ಕಾರ್ಯ ನಡೆಯಬೇಕಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಯದ ಕುಲಪತಿಗಳಾದ ಪ್ರೊ. ಡಿ.ಬಿ. ನಾಯಕ ಅವರು ಹೇಳಿದರು. 
    ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಹಮ್ಮಿಕೊಂಡ ದೊಡ್ಡಾಟ ಸಂಗೀತ-ಕುಣಿತಗಳ ಕಾರ್ಯಾಗಾರ ಮತ್ತು ದಾಖಲೀಕರಣ ಎಂಬ ಕಾರ್ಯಕ್ರವನ್ನು ಮದ್ದಳೆ ಬಾರಿಸುವುದರ ಮೂಲಕ ಉದ್ಘಾಟಿಸಿ ಉದ್ಘಾಟನಾಪರ ಮಾತುಗಳನ್ನು ಆಡುತ್ತಾ ಇಂದಿನ ಪೀಳಿಗೆ ಈ ಕಲೆಗಳತ್ತ ಆಕರ್ಷಕರಾಗದೇ ಡಿಜೆ ಸೌಂಡಿನತ್ತ ಆಕರ್ಷಕರಾಗುತ್ತಿದ್ದಾರೆ. ಇದನ್ನು ಬದಲಾಯಿಸಿ ನಮ್ಮ ಕಲೆಗಳ ಸಾಹಿತ್ಯ ಮತ್ತು ಕುಣಿತಕ್ಕೆ ದಾಸರನ್ನಾಗಿ ಮಾಡಬೇಕಾದ ಜವಬ್ದಾರಿ ನಮ್ಮಂತಹ ವಿಶ್ವವಿದ್ಯಾಲಯ ಮತ್ತು ಅಕಾಡೆಮಿಗಳಿಗಿದೆ. ಹಾಗಾಗಿಯೇ ನಾವು ಅವುಗಳನ್ನು ಸಂರಕ್ಷಿಸುವಂತಹ, ಉಳಿಸುವಂತಹ, ಬೆಳೆಸುವಂತಹ ಹಾಗೆ ಇದರತ್ತ ಯುವ ಸಮುದಾಯವನ್ನು ಸೆಳೆಯುವಂತಹ ಕಾರ್ಯಗಳನ್ನು ಈ ಮೂಲಕ ಮಾಡುತ್ತಿದ್ದೇವೆ ಎಂದರು. 
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಿ.ಬಿ.ನಾಯಕ ಅವರು ಮದ್ದಳೆ ಬಾರಿಸಿ ಉದ್ಘಾಟಿಸಿದರು 
(ಚಿತ್ರಕೃಪೆ :  ಶ್ರೀ.ಬಸವರಾಜ  ಜೆ)  
      ಪ್ರಾಸ್ತಾವಿಕ ಮಾತುಗಳನ್ನು ಆಡಿದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಎಂ.ಎನ್.ವೆಂಕಟೇಶ ಅವರು ದೊಡ್ಡಾಟವು ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಕಲೆಯಾಗಿದ್ದು ಇದರ ಛಾಪು ಆಂಧ್ರದ 'ವಿಧಿನಾಟಕಂ' ಮತ್ತು ತಮಿಳಿನ 'ತಿರುಕುಟ್ಟುಂ'ನಲ್ಲಿ ಕಾಣಬಹುದು. ಹಾಗಾಗಿ ಇದರ ಮೂಲವನ್ನು ಅರಿಯ ಬೇಕಾದರೆ ತೌಲನಿಕ ಅಧ್ಯಯನ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ದೊಡ್ಡಾಟ ಕುರಿತ ಯೋಜನೆ ಕೈಗೊಳ್ಳುವ ಹಂತದಲ್ಲಿದೆ ಎಂದರು. 
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕರ್ನಾಟಕದ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ.ಟಿ.ಬಿ.ಸೊಲಬಕ್ಕನವರ ಅವರು ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಸರಕಾರ ನನಗೆ ಜವಬ್ದಾರಿಯನ್ನು ವಹಿಸಿದೆ ಹಾಗಾಗಿ ಈ ದೊಡ್ಡಾಟ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಾರ್ವಜನಿಕರ, ಶಾಲಾ-ಕಾಲೇಜುಗಳ, ಸಂಘ-ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ನೆರವೇರಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಹೇಳುತ್ತಾ ಎಲ್ಲರ ಸಹಕಾರ ಅನಿವಾರ್ಯವಿದೆ ಎಂಬುದನ್ನು ಮನಗಾಣಿಸಿದರು. ಇಂತಹ ಕಲೆಯಿಂದ ಯುವಕರು ಮತ್ತು ಮಕ್ಕಳು ಯಾಕೆ ದೂರಾಗುತ್ತಿದ್ದಾರೆ ಎಂಬುದಕ್ಕೆ ತಂದೆ-ತಾಯಿಗಳು ಸಹ ಪ್ರಮುಖ ಕಾರಣ. ಆ ರುಚಿಯನ್ನು ನಮ್ಮ ಮಕ್ಕಳಿಗೆ ನಾವು ಬಾಲ್ಯದಲ್ಲಿ ತಿಳಿಸಲೇ ಇಲ್ಲ. ರ್ಯಾಂಕ್ ಎಂಬ ಅಂಕಗಳ ಹುಚ್ಚನ್ನೇ ಹಚ್ಚಿಸಿ ಅವರಿಗೆ ನಮ್ಮ ಕಲೆಯನ್ನು ವಂಚಿಸುತ್ತಿದ್ದೇವೆ ಎಂದು ಪಾಲಕರನ್ನು ಎಚ್ಚರಿಸಿದರು. 
ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಡಾ.ಟಿ.ಬಿ.ಸೊಲಬಕ್ಕನವರ ಅವರು ಮಾತನಾಡುತ್ತಿರುವುದು 
(ಚಿತ್ರಕೃಪೆ :  ಶ್ರೀ.ಶರೀಫ್ ಎಂ) 
   ಹಾವೇರಿ ಜಿಲ್ಲಾ ವಾರ್ತಾ ಇಲಾಖೆಯ ಅಧಿಕಾರಿಗಳಾದ ಡಾ. ಬಿ.ಆರ್. ರಂಗನಾಥ ಅವರು ಅತಿಥಿಗಳಾಗಿ ಮಾತನಾತ್ತಾ ಬಯಲುಸೀಮೆಯ ಕಲಾವಂತಿಕೆಯು ನಿರ್ಲಕ್ಷಕ್ಕೆ ಒಳಗಾಗಿವೆ ಇವುಗಳನ್ನು ಎಚ್ಚರಿಸುವಂತಹ ಜಾಣ್ಮೆ ನಮ್ಮಲ್ಲಿ ಆಗಬೇಕಾಗಿದೆ ಎಂದರು.
       ವಿಶ್ವವಿದ್ಯಾಲಯದ ಕಲಾ ಶಿಕ್ಷಕರಾದ ಶರೀಫ ಮಾಕಪ್ಪನವರ ಅವರು ದೊಡ್ಡಾಟದ ನಾಂದಿ ಹಾಡುವುದರ ಮೂಲಕ ಪ್ರಾರ್ಥಿಸಿದರೆ, ಉತ್ಸವ ರಾಕ್ ಗಾರ್ಡನ್ನಿನ ಉತ್ಸವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದೊಡ್ಡಾಟ ವೇಷ ಹಾಕಿ ನೃತ್ಯ ಮಾಡುವುದರ ಮೂಲಕ ಪ್ರಾರ್ಥನೆಯ ಸೊಬಗನ್ನು ಹೆಚ್ಚಿಸಿದರು. ಈ ಕಾರ್ಯಕ್ರಮದಲ್ಲಿ ನಾನಾ ಪ್ರದೇಶದ ದೊಡ್ಡಾಟ ಕಲಾವಿದರು, ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯರಾದ ಡಾ. ಕೆ ರುದ್ರಪ್ಪ ಅವರು ಎಲ್ಲರಿಗೂ ವಂದನೆ ಸಲ್ಲಿಸಿದರೆ, ಡಾ.ಚಂದ್ರಪ್ಪ ಸೊಬಟಿ ಅವರು ಕಾರ್ಯಕ್ರಮ ನಿರೂಪಿಸಿದರು.          
                                                                  ವರದಿ : ಡಾ. ನದಾಫ ಎಚ್.ಎಚ್. ಹತ್ತಿಮತ್ತೂರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ