ಈಚಲಯಲ್ಲಾಪುರ ಗ್ರಾಮದ ಶ್ರೀ ಮರದಮ್ಮದೇವಿ ಜಾತ್ರೋತ್ಸವ
- ಡಾ.ರಾಜಶೇಖರ ಚಂ.ಡೊಂಬರಮತ್ತೂರ
ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಹಲವಾರು ಧರ್ಮಗಳು ತಮ್ಮದೆಯಾದಂತ ನಂಬಿಕೆ, ಸಂಪ್ರದಾಯ, ಆಚರಣೆ, ಜಾತ್ರೆ, ಉತ್ಸವಗಳನ್ನು ಪರಂಪರಾಗತವಾಗಿ ಉಳಿಸಿಕೊಂಡು ಬಂದಿವೆ. ಇವುಗಳು ಜನಪದರ ಸಾಂಸ್ಕೃತಿಕ ಪರಂಪರೆಗೆ ಪ್ರಮುಖ ಆಧಾರಸ್ತಂಭಗಳಾಗಿರುವುದರಿಂದ ಗ್ರಾಮೀಣ ಬದುಕಿನ ಜೀವಂತ ನಾಡಿಮಿಡಿತಗಳಾಗಿದ್ದು, ಬಹುಮುಖಿ ಸಾಂಸ್ಕೃತಿಕ ಜೀವನಕ್ಕೆ ಕನ್ನಡಿಯಾಗಿವೆ.
ಒಂದೊಂದು ಗ್ರಾಮದಲ್ಲಿ ನಡೆಯುವ ಒಂದೊಂದು ಜಾತ್ರೆಗಳು ಸಾಮಾಜಿಕ, ಧಾರ್ಮಿಕ ಹಾಗೂ ಕಲಾತ್ಮಕ ಬದುಕಿನಂಥ ಹಲವಾರು ದೃಷ್ಟಿಯಿಂದ ಹಳ್ಳಿಗರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಒಂದು ಜಾತ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಈಚಲಯಲ್ಲಾಪುರ ಗ್ರಾಮದಲ್ಲಿ ಪ್ರತಿ ವರ್ಷದ ನವಂಬರ್ ತಿಂಗಳಿನಲ್ಲಿ ಬಹು ವಿಜೃಂಭಣೆಯಿಂದ ಜರುಗುತ್ತಲಿರುವುದರಿಂದ, ಈ ಲೇಖನದ ಮೂಲಕ ಅದರ ವೈಶಿಷ್ಟ್ಯವನ್ನು ತಿಳಿಯಪಡಿಸುತ್ತಿದ್ದೇನೆ.
ಜಿಲ್ಲಾ ಕೇಂದ್ರದಿಂದ ಈಶಾನ್ಯಕ್ಕೆ ೨೨ ಕಿ.ಮೀ. ದೂರ ಹಾಗೂ ತಾಲೂಕು ಕೇಂದ್ರದಿಂದ ಪೂರ್ವಕ್ಕೆ ೧೬ ಕಿ.ಮೀ ದೂರದಲ್ಲಿರುವ ಈಚಲಯಲ್ಲಾಪುರವು ತನ್ನದೇ ಆದ ಪ್ರಕೃತಿ ವೈಶಿಷ್ಟ್ಯವನ್ನು ಹೊಂದಿದ್ದು ಮಲೆನಾಡಿನಂತೆ ಭಾಸವಾಗುತ್ತದೆ. ಮನೆಗಳೇ ಕಾಣಿಸದಂತಹ ದಟ್ಟ ಹಸಿರು, ಪಕ್ಕದಲ್ಲೇ ಮೈದುಂಬಿ ನಿಂತ ವಿಶಾಲವಾದ ಕೆರೆ ನೋಡುಗರಿಗೆ ಆನಂದವನ್ನುಂಟು ಮಾಡುತ್ತದೆ.
'ಸುಮಾರು ೮೦ ವರ್ಷಗಳ ಹಿಂದೆ ಊರಿನ ಪೂರ್ವಕ್ಕೆ ಇರುವ ಶ್ರೀ ಹನುಮಂತ ದೇವರ ದೇವಸ್ಥಾನದ ಸುತ್ತಲಿನ ಸ್ಥಳ ಪೂರ್ವದ ಹಳೆ ಊರಾಗಿತ್ತು. ಸದಾ ಹರಿಯುವ ಹಳ್ಳ, ಎತ್ತರೆತ್ತರದ ಈಚಲು, ಹುಣಸೆ, ಹೊಂಗೆ, ಮಾವು, ಬೇವು, ಅತ್ತಿ, ಜಾಲಿಮರಗಳು ಹಾಗೂ ದಟ್ಟ ಪೊದೆಗಳಿಂದ ತುಂಬಿದ್ದ ಸಮೃದ್ಧ ಪ್ರದೇಶದಲ್ಲಿ ಕಾಡುಪ್ರಾಣಿಗಳು, ಪಕ್ಷಿಗಳು ವಾಸವಾಗಿದ್ದುದರಿಂದ ಜನಜೀವನ ಭಯದಲ್ಲೇ ಸಾಗುತ್ತಿತ್ತು. ಅಂತಹುದರಲ್ಲೇ ಪ್ಲೇಗಿನಂತಹ ರೋಗ ರುಜಿನುಗಳಿಂದ ಜನರು ಬದುಕುಳಿಯುವುದು ದುಸ್ತರವಾಗಿತ್ತು. ಹೀಗಾಗಿ ಹಳೆಯ ಊರನ್ನು ಬಿಟ್ಟು ಪಶ್ಚಿಮದ ಕಡೆಗಿನ ಎತ್ತರದ ಜಾಗಕ್ಕೆ ಸ್ಥಳಾಂತರವಾದರು' ಎಂದು ಊರಿನ ಹಿರಿಯರಾದ ಶ್ರೀ ಹುಲ್ಲಪ್ಪ ಬಣಕಾರ ಅವರು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ ಗ್ರಾಮದ ಸ್ಥಳಾಂತರ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗ ಈ ಹಳೇ ಊರು 'ಹಾಳೂರು' ಆಗಿ, ಹನುಮಪ್ಪ ಹಾಳೂರಲ್ಲೇ ಉಳಿದು 'ಹಾಳೂರು ಹನುಮಪ್ಪ' ಎನಿಸಿಕೊಂಡಿದ್ದಾನೆ.
![]() |
| ಬಾವಿಯ ಗೋಡೆ ಮೇಲಿನ ಬರೆವಣಿಗೆ |
'ಯಲ್ಲಾಪುರ' ಎಂದಷ್ಟೇ ಇದ್ದಿರಬಹುದಾಗಿದ್ದ ಈ ಊರು ಸ್ಥಳಾಂತರಗೊಂಡ ಮೇಲೆ ಹಳೇ ಊರಿನ ಹೆಸರೇ ಬೇಡ ಎಂದು ನಿರ್ಧರಿಸಿ, ಹೊಸದಾಗಿ ಸಿದ್ಧವಾಗಿರುವ ಊರಿಗೆ 'ಸಿದ್ಧವೀರಾಪುರ' ಎಂಬ ಹೆಸರಿಟ್ಟರು. ಇದಕ್ಕೆ ಪುಷ್ಟಿಯಾಗಿ ಹೊಸ ಊರಿನಲ್ಲಿ ಕುಡಿಯುವ ನೀರಿನ ಅನುಕೂಲಕ್ಕಾಗಿ ಕ್ರಿ.ಶ. ೧೯೪೧ ರಲ್ಲಿ ಕಟ್ಟಿರುವ ಬಾವಿಯ ಗೋಡೆ ಮೇಲಿನ 'ಓಂ | ನಮಃ ಶಿವಾಯ | ಸಿದ್ಧವೀರಾಪುರ | ೧೯೪೧' ಎಂಬ ಬರೆವಣಿಗೆಯು ಈಗಲೂ ಕಂಡುಬರುತ್ತದೆ. 'ಸಿದ್ಧ' ಅಥವಾ 'ಸಿದ್ಧವೀರ' ಎಂಬುದಕ್ಕೆ ಯಾವುದೇ ಪೌರಾಣಿಕ ವ್ಯಕ್ತಿಗಳ ಉಲ್ಲೇಖ ದೊರೆಯುವುದಿಲ್ಲ. ನಂತರದಲ್ಲಿ 'ಸಿದ್ಧವೀರಾಪುರ' ಎಂಬ ಈ ಊರಿನ ಹೆಸರು ಯಾರಿಗೂ ಗುರುತು ಸಿಗದ ಕಾರಣ ಮೊದಲಿನ 'ಯಲ್ಲಾಪುರ'ವೇ ಬಳಕೆಗೆ ಬಂತು. ಆದರೆ ಈ ಊರಿನಿಂದ ಸುಮಾರು ೧೮ ಕಿ.ಮೀ ದೂರದಲ್ಲಿ 'ಇಚ್ಚಂಗಿ-ಯಲ್ಲಾಪುರ' ಎಂಬ ಊರು ಕೂಡ ಇದ್ದುದರಿಂದ ಗೊಂದಲವಾಗಿ ಈಚಲುಮರಗಳಿಂದ ತುಂಬಿದ ಈ ಊರಿಗೆ ನಿಸರ್ಗವಾಚಿಯಾಗಿಯೇ 'ಈಚಲ-ಯಲ್ಲಾಪುರ' ಎಂಬ ಹೆಸರು ಚಲಾವಣೆಗೆ ಬಂದಿತು.
![]() |
| ಶ್ರೀ ಮರದಮ್ಮದೇವಿ (ಎಲೆ ಸೇವೆ) |
ಈ ಗ್ರಾಮದ ದೇವತೆಯೇ ಮರದಮ್ಮ. ಗಿಡ-ಮರಗಳೊಟ್ಟಿಗೆ ವಾಸಿಸುತ್ತ ಅವುಗಳ ಜೊತೆಗಿನ ಭಾವಪೂರ್ಣ ಸಂಬಂಧವನ್ನು ಉಳಿಸಿಕೊಂಡು ಬಂದಿರುವ ನಮ್ಮ ಜನಪದರು ಅವುಗಳಲ್ಲೇ ದೈವತ್ವವನ್ನು ಕಂಡುಕೊಂಡವರು. ಇವರು ವೃಕ್ಷದೇವತೆಯನ್ನು ಮರೆವ್ವ, ಕರೆವ್ವ, ಮರದವ್ವ, ದ್ಯಾಮವ್ವ, ದುರಗವ್ವ, ಎಲ್ಲವ್ವ, ಬನಶಂಕರಿ ಎಂದು ಗ್ರಾಮದೇವತೆಯೊಡನೆ ಅಭೇದ ಕಲ್ಪಿಸಿ ಪೂಜಿಸುತ್ತಾರೆ. ಗ್ರಾಮದೇವತೆಯ ಒಂದು ಸ್ವರೂಪವೇ ಮರದಮ್ಮ ಆಗಿರುವುದರಿಂದ ಊರಿನ ಈಶಾನ್ಯ ದಿಕ್ಕಿಗೆ ಇರುವ ವಿಶಾಲ ಬಯಲಿನಲ್ಲಿರುವ ಪುಟ್ಟ ನೀರಿನ ಹೊಂಡ, ಬೇವಿನ ಮರದ (ಮರದ+ಅಮ್ಮ=ಮರದಮ್ಮ) ಅಡಿಯಲ್ಲಿ ಸುಮಾರು ವರ್ಷಗಳಿಂದ ಪೂಜಿಸಿಕೊಂಡು ಬಂದಿರುವ ದೇವತೆಯೇ 'ಶ್ರೀ ಮರದಮ್ಮ'. ಈ ದೇವತೆಯು ಬೇಡಿ ಬಂದ ಭಕ್ತರಿಗೆ ವರ ನೀಡುವ ವರದಾಯಿನಿ, ಸಂತಾನ ಫಲ ಕರುಣಿಸುವ ಮಾತೃ ಹೃದಯಿ, ಸಕಲ ಸಂಪತ್ತನ್ನು ದಯಪಾಲಿಸುವ ಕರುಣಾಮಯಿಯಾಗಿ ಭಕ್ತ ಸಂಕುಲವನ್ನು ಸಲಹುತ್ತಿದ್ದಾಳೆ.
ಈ ಗ್ರಾಮದಲ್ಲಿ ಹಲವಾರು ಜಾತಿ ಜನಾಂಗದ ಬಾಂಧವರು ಭಾವೈಕ್ಯತೆಯಿಂದ ಬಾಳುತ್ತಿದ್ದು, ಪರಿಶ್ರಮ, ಶ್ರದ್ಧೆ, ತ್ಯಾಗ, ತಾಳ್ಮೆ, ಅನುಕಂಪ, ಸದಾಚಾರಗಳಿಂದ ಶಾಂತಿ ಪ್ರಿಯರೂ, ಧರ್ಮ ಸಹಿಷ್ಣುಗಳೂ ಆಗಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ನಂಬಿಕೆಯುಳ್ಳವರಾಗಿರುವುದರಿಂದ ಹಿಂದಿನಿಂದಲೂ ಇಲ್ಲಿ ದಾನ, ಧರ್ಮ, ಹಬ್ಬ, ಜಾತ್ರೆ, ಆಚರಣೆಗಳು, ಉತ್ಸವಗಳು ಜರುಗುತ್ತಲೇ ಇರುತ್ತವೆ. ಜಾತ್ರೆ ನಡೆಯುವ ದಿನವನ್ನೂ ಊರಿನ ಜನತೆಯೇ ನಿರ್ಧರಿಸುತ್ತಿದ್ದು, ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪಂಚಮಿ ನಂತರ (ಗೌರಿ ಹುಣ್ಣಿಮೆ ಆಗಿ ಐದು ದಿನ ಕಳೆದ ಬಳಿಕ) ಬರುವ ಮಂಗಳವಾರ ಅಥವ ಶುಕ್ರವಾರದಂದು ಜಾತ್ರೆಯ ದಿನವೆಂದು ನಿಗದಿಪಡಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಂಗಳವಾರವೇ ಗ್ರಾಮ ದೇವತೆ ಶ್ರೀ ಮರದಮ್ಮ ದೇವಿಯ ಜಾತ್ರೆಯು ನಡೆಯುತ್ತಿದೆ.
ತೊಟ್ಟಿಲುಜೀಕುಗಳು, ದಿನಸಿ ಅಂಗಡಿಗಳು, ಚಹಾದಂಗಡಿಗಳು, ಮಕ್ಕಳಾಟಿಕೆ ವಸ್ತುಗಳ ಮಾರಾಟಗಾರರು, ಮಣಿಗಾರರು, ಹಣ್ಣು-ಕಾಯಿ, ಹೂಮಾಲೆ ಮಾರುವವರು ಹಾಗೂ ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ದಾವಣಗೆರೆ, ಗದಗ ಮುಂತಾದ ಜಿಲ್ಲೆಗಳಿಂದ ಭಕ್ತರು ಜಾತ್ರೆಗೆ ಮಂಗಳವಾರ ಮುಂಜಾನೆಯೇ ಬಂದು ದೇವಸ್ಥಾನದ ವಿಶಾಲ ಜಾಗದಲ್ಲಿ ಬೀಡುಬಿಟ್ಟಿರುತ್ತಾರೆ.
ಮಂಗಳವಾರ ದಿವಸ ಸಾಯಂಕಾಲ ೪ ಗಂಟೆಗೆ ಊರೊಳಗಿಂದ ಭಜನೆ, ಡೊಳ್ಳು, ಬಾಜಾ ಭಜಂತ್ರಿ, ಝಾಂಜ್ ಮೇಳ ಮುಂತಾದ ಜನಪದ ವಾದ್ಯ ವೈಭವಗಳೊಂದಿಗೆ ಭಕ್ತರು ದೇವತೆಗೆ ಬೇಡಿಕೊಂಡಿರುವ ಹರಕೆಗಳನ್ನು ತೀರಿಸಲು ಮೆರವಣಿಗೆ ಮುಖಾಂತರ ದೇವಸ್ಥಾನದ ಕಡೆಗೆ ಹೊರಡುವುದು. ದೇವಿಯ ಸನ್ನಿಧಾನವನ್ನು ತಲುಪಿ ಹೂವಿನ ಹಾರಗಳನ್ನು ಹಾಕಿ, ಎಲೆ ಸೇವೆ (ವೀಳ್ಯೆದೆಲೆ) ನೀಡಿ ಸಿಹಿ ಪದಾರ್ಥದ ಎಡೆಯನ್ನು ಅರ್ಪಿಸಿ ಪುನೀತರಾಗುತ್ತಾರೆ.
![]() |
| ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ |
ರಾತ್ರಿ ೮ ಗಂಟೆಯಿಂದ ಅಹೋ ರಾತ್ರಿ ದೇವಸ್ಥಾನದ ಆವರಣದಲ್ಲಿಯೇ ಎಲ್ಲರೂ ಬಿಡಾರ ಹೂಡಿದ್ದು, ಜಾತ್ರೆಯ ವಿಶೇಷ ಅಡಿಗೆ ತಯಾರಿಸುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಡೊಳ್ಳಿನ ಪದ, ಡೊಳ್ಳಿನ ಕೈಪೆಟ್ಟು, ಗೀಗೀ ಪದ, ಲಾವಣಿ ಪದ, ಭಜನಾ ಪದ, ಕುಣಿತ ಮುಂತಾದ ಜನಪದ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗುತ್ತವೆ.
ಬೆಳಗಿನ ಜಾವ (ಮಾರನೇ ದಿನ ಬುಧವಾರ ಪ್ರಾತಃ ಕಾಲ) ೨ ಗಂಟೆಗೆ ದೇವಿಯ ಉತ್ಸವಮೂರ್ತಿಯನ್ನು ಪೂಜಾರಿಕೆಯವರ ಮನೆಯಿಂದ ತಂದು, ಬಸವಣ್ಣ ದೇವರ ದೇವಸ್ಥಾನದ ಪಲ್ಲಕ್ಕಿಯಲ್ಲಿಟ್ಟು ಜೊತೆಗೆ ಮಾರಿಕಾಂಬೆಯ ಉತ್ಸವ ಮೂರ್ತಿಯನ್ನೂ ಇಟ್ಟು ಪೂಜಿಸಿ ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಓಣಿ ಓಣಿಗಳಲ್ಲಿ ಮೆರವಣಿಗೆ ಮಾಡುತ್ತ ಸಾಗುತ್ತಾರೆ. ಇದರೊಂದಿಗೆ ಹರಕೆ ಹೊತ್ತ ಭಕ್ತರು ದೀರ್ಘದಂಡ ನಮಸ್ಕಾರ, ಉರುಳು ಸೇವೆ ಮಾಡುತ್ತಾರೆ. ಹೂಬಾಣ, ಸಿಡಿಮದ್ದುಗಳನ್ನು ಹಾರಿಸಿ ಸಂಭ್ರಮ ಮೆರೆಯುತ್ತಾರೆ. ಬೆಳಗಿನ ೫ ರ ಜಾವದಲ್ಲಿ ದೇವಸ್ಥಾನ ತಲುಪಿದ ನಂತರ ಪಲ್ಲಕ್ಕಿಯನ್ನು ಪ್ರಾಂಗಣದಲ್ಲಿಟ್ಟು ಪೂಜಿಸಲಾಗುತ್ತದೆ. ತಯಾರಿಸಿದ ವಿಶೇಷ ಅಡುಗೆಯನ್ನು ಎಡೆ ಮಾಡಿ ಎಲ್ಲರೂ ತಂದು ದೇವಿಗೆ ಅರ್ಪಿಸುತ್ತಾರೆ.
ಬೆಳಕು ಹರಿಯುವುದರೊಳಗೆ ಎಡೆಯನ್ನು ಒಟ್ಟುಗೂಡಿಸಿ ಸಕಲ ಜೀವರಾಶಿಗೆ ಅನ್ನದಾನವನ್ನು ಮಾಡುವ ಮುಖಾಂತರ ಭಕ್ತಕೋಟಿಗೆ ಸಿರಿ ಸಂಪತ್ತನ್ನು ಕರುಣಿಸು ತಾಯೆ ಎಂದು ದೇವಸ್ಥಾನದ ಸುತ್ತಲಿನ ಮೇರೆ(ಗಡಿ)ಯವರೆಗೂ ಚೆರಗವನ್ನು ಚೆಲ್ಲುತ್ತಾರೆ. ಈ ಸಮಯದಲ್ಲಿ ಪೂಜಾರಿಯ ಮೈಮೇಲೆ ದೇವಿಯು ಬಂದು ಹೇಳಿಕೆ ಹೇಳುವ ಮೂಲಕ ಭಕ್ತರ ಬೇಡಿಕೆಗಳನ್ನು ಇಡೇರಿಸುತ್ತಾಳೆಂಬ ನಂಬಿಕೆ ಬಲವಾಗಿದೆ.
ಬುಧವಾರ ದಿವಸ ಮುಂಜಾನೆ ದೇವಿಯ ಸನ್ನಿಧಾನದಿಂದ ವಾದ್ಯ ವೈಭವಗಳೊಂದಿಗೆ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಊರೊಳಗೆಲ್ಲ ಮೆರವಣಿಗೆ ಮಾಡುವುದರೊಂದಿಗೆ ಜಾತ್ರೆಯು ಮುಕ್ತಾಯಗೊಳ್ಳುತ್ತದೆ.
- ಡಾ.ರಾಜಶೇಖರ ಚಂ.ಡೊಂಬರಮತ್ತೂರ
![]() |





ನಿಮ್ಮ ಊರಿನ ಜಾತ್ರೆಯನ್ನು ಕುರಿತು ತುಂಬಾ ಸೊಗಸಾಗಿ ಲೇಖನ ಬರೆದಿದ್ದಿರಿ.
ಪ್ರತ್ಯುತ್ತರಅಳಿಸಿಧನ್ಯವಾದಗಳು...
ಅಳಿಸಿನಿಮ್ಮ ಊರಿನ ಜಾತ್ರೆಯನ್ನು ಕುರಿತು ತುಂಬಾ ಸೊಗಸಾಗಿ ಲೇಖನ ಬರೆದಿದ್ದಿರಿ.
ಪ್ರತ್ಯುತ್ತರಅಳಿಸಿಐತಿಹಾಸಿಕ ನಮ್ಮ ಊರಿನ ಶ್ರೀ ಮರದಮ್ಮ ದೇವಿಯ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟ ತಮಗೆ.. ಧನ್ಯವಾದಗಳು 🙌🙏👏
ಪ್ರತ್ಯುತ್ತರಅಳಿಸಿಲೇಖನವನ್ನು ಓದಿ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಸಲಹೆ,ಸಹಕಾರ ಸದಾ ಇರಲಿ...
ಅಳಿಸಿ🙏
ಪ್ರತ್ಯುತ್ತರಅಳಿಸಿನಮ್ಮೂರಿನ ಮತ್ತು ಜಾತ್ರೆಯ ಬಗ್ಗೆ ಎಲ್ಲರಿಗೂ ತಿಳಿಸಿದ ನನ್ನ ಅಣ್ಣನಿಗೆ ನನ್ನ ದನ್ಯವಾದಗಳು..
ಪ್ರತ್ಯುತ್ತರಅಳಿಸಿ